ಬೈಂದೂರು : ಇತಿಹಾಸ ಪ್ರಸಿದ್ಧ ತಗ್ಗರ್ಸೆ ಹೆಗ್ಡೆಯವರ ಮನೆ ಗದ್ದೆಯಲ್ಲಿ ಅನುವಂಶಿಕವಾಗಿ ನಡೆದು ಬಂದ ಕಂಬಳ ಮಹೋತ್ಸವ ವಿಜೃಂಭಣೆ ನಡೆಯಿತು. ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗ ಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಗಿತ್ತು.
ಪ್ರತಿಯೊಂದು ಕೋಣದ ಮಾಲೀಕರು ತಮ್ಮ ಕೋಣವನ್ನು ಸಿಂಗರಿಸಿ ಕೋಣಗಳ ತಲೆಗೆ ಸಿಂಗಾರು ಕೊನೆಯನ್ನು ಕಟ್ಟಿ ವಾದ್ಯದ ಮೂಲಕ ದೇವರ ಹೆಸರನ್ನು ಹೊಳಲು ಕೂಗುತ್ತಾ ಕಂಬಳ ಗದ್ದೆಗೆ ಇಳಿಸಿ ನಂತರ ಕಂಬಳ ಗದ್ದೆಯ ನೀರನ್ನು ಕೋಣಗಳಿಗೆ ಸಿಂಪಡಿಸಿ ಸ್ವಲ್ಪ ನೀರನ್ನು ಕೋಣಗಳಿಗೆ ಕುಡಿಸಿ ತಮ್ಮ ಕೋಣವನ್ನು ಓಡಿಸಿದರು.

ಕಂಬಳಕ್ಕೆ ಬರುವ ಕೋಣಗಳಿಗೆ ವೀಳ್ಯ, ತೆಂಗಿನಕಾಯಿ, ಕಬ್ಬು ಹಾಗೆಯೇ ಕೋಣಗಳ ಮಾಲೀಕರಿಗೆ ಹೆಗಲಿಗೆ ಶಾಲು ಹೊದಿಸಿ ಗೌರವದಿಂದ ಬರಮಾಡಿಕೊಳ್ಳಲಾಯಿತು. ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ ಅಲಂಕಾರಿಸಿ ತಗ್ಗರ್ಸೆ ಹೆಗ್ಡೆ ಮನೆಯವರ ಕೋಣವನ್ನು ಸಿಂಗರಿಸಿಕೊಂಡು ದೈವ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಹುಟ್ಟಿನ ಮನೆ ಕೋಣವನ್ನು ಮೆರವಣಿಗೆ ಮೂಲಕ ಕಂಬಳ ಗದ್ದೆಗೆ ತರುವುದರ ಮುಖೇನ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಯಿತು.
ಕೊನೆಯಲ್ಲಿ ತಗ್ಗರ್ಸೆ ಹೆಗ್ಡೆಯವರ ಮನೆಯ 4 ಜೊತೆ ಕೋಣಗಳು ಕಂಬಳ ಗೆದ್ದೆಯಲ್ಲಿ ಓಡಿಸುವುದರ ಮೂಲಕ ಕಂಬಳ ಮುಕ್ತಾಯಗೊಳಿಸಲಾಯಿತು.
60 ಜೊತೆ ಕೋಣಗಳು ಈ ಕಂಬಳದಲ್ಲಿ ಭಾಗವಹಿಸಿದ್ದು, ಈ ಪೈಕಿ ವಿಜೇತವಾಗಿರುವ ಕೋಣಗಳಿಗೆ ಮೂಕಾಂಬಿಕಾ ಗೇರುಬೀಜ ಕಾರ್ಖಾನೆ ತಗ್ಗರ್ಸೆ ಇವರು ನಗದು ಮತ್ತು ಶಾಶ್ವತ ಫಲಕ ಪ್ರಾಯೋಜಕರಾಗಿದ್ದಾರೆ.
ಈ ಸಂದರ್ಭದಲ್ಲಿ ಕಂಠದಮನೆ ಟಿ. ನಾರಾಯಣ್ ಹೆಗ್ಡೆ, ಕಂಠದಮನೆ ಕೆ. ಬಾಬು ಹೆಗ್ಡೆ ತಗ್ಗರ್ಸೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಕೊಲ್ಲೂರು ಹಾಗೂ ತಗ್ಗರ್ಸೆ ಹೆಗ್ಡೆ ಕುಟುಂಬದವರು, ಹಲವಾರು ಕಂಬಳ ಅಭಿಮಾನಿಗಳು ತಗ್ಗರ್ಸೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: ರೌಡಿಶೀಟರ್ಗಳನ್ನು ಬೇಕಾಬಿಟ್ಟಿ ಠಾಣೆಗೆ ಕರೆಸುವಂತ್ತಿಲ್ಲ | ಪ್ರಕ್ರಿಯೆ ನಿಗದಿಪಡಿಸಿದ ಹೈಕೋರ್ಟ್ !



















