ಉಡುಪಿ : ಮಧ್ವನಗರಿ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮತ್ತೊಂದು ಐತಿಹಾಸಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಅಪ್ಪಟ ಚಿನ್ನದ ಹಾಳೆಗಳ ‘ಭಗವದ್ಗೀತೆ’ಯನ್ನು ಉಡುಪಿ ಕೃಷ್ಣನಿಗೆ ಅರ್ಪಿಸಿದ್ದಾರೆ.

ವಿಶ್ವಗೀತಾ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪುತ್ತಿಗೆ ಮಠದ ಚತುರ್ಥಿ ಪರ್ಯಾಯದ ವಿವಿಧ ಕಾರ್ಯಕ್ರಮಗಳ ಸಮಾರೋಪವಾಗಿ ಭಕ್ತರೊಬ್ಬರು ಅಪರೂಪದ ಉಡುಗೊರೆ ನೀಡಿದ್ದಾರೆ. ಭಗವದ್ಗೀತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಆಧ್ಯಾತ್ಮಿಕ ಲೋಕದಲ್ಲಿ ಹೊಸ ಮೈಲಿಗಲ್ಲಾಗಲಿದೆ.

ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಯ ಮೇಲೆ ಮುದ್ರಿಸಲಾಗಿದೆ. ಚಿನ್ನದ ಭಗವದ್ಗೀತೆಯನ್ನು ಚಿನ್ನದ ರಥದಲ್ಲಿ ಇರಿಸಿ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಶ್ರೀಕೃಷ್ಣನ ಸನ್ನಿಧಿಗೆ ಕೊಂಡೊಯ್ಯಲಾಯಿತು.



















