ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಸಿದ್ದಾಪುರ ಸರ್ಕಲ್ ಬಳಿ ಇಂದು ಜನಾಗ್ರಹ ಸಭೆ ಹಾಗೂ ಭಾರೀ ಪ್ರತಿಭಟನೆ ನಡೆಯಲಿದೆ. ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಮುಖಂಡರು, ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕ ಪ್ರತಾಪಚಂದ್ರ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಯೋಜನೆ ವಿಳಂಬವಾಗುತ್ತಿರುವುದಕ್ಕೆ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಯಲಿದೆ. ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಗುರುರಾಜ ಗಂಟಿಹೊಳೆ ಭಾಗಿಯಾಗಲಿದ್ದಾರೆ.
ಸಿದ್ದಾಪುರ ಸರ್ಕಲ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದು, ಬಳಿಕ ಪ್ರತಿಭಟನಾಕಾರರು ಪಾದಯಾತ್ರೆಯ ಮೂಲಕ ವಾರಾಹಿ ಯೋಜನಾ ಕಚೇರಿಗೆ ತೆರಳಲು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ವಿರುದ್ಧ ರೈತರ ಅಸಮಾಧಾನ ವ್ಯಕ್ತಪಡಿಸಲಿದ್ದು, ಏತ ನೀರಾವರಿ ಯೋಜನೆಗೆ ತಡೆ ತಂದಿರುವ ಆರೋಪವನ್ನು ರೈತರು ಮಾಡಲಿದ್ದಾರೆ. ಅಲ್ಲದೆ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಾತ್ರದ ಬಗ್ಗೆ ಕೂಡ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಲಿದ್ದಾರೆ.
ಇದನ್ನೂ ಓದಿ :ಮನ್ರೇಗಾ ಉಳಿಸಿ ಆಂದೋಲನ | ಧಾರವಾಡದ ಡಿಸಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ



















