ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಿವಿಧ ಸಂಘಟನೆಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
ಮಂಗಳವಾರ ಗೌರಿ ಹಬ್ಬ ವಿಜೃಂಭಣೆ ಯಿಂದ ನಡೆದಿದ್ದು ಇಂದು(ಬುಧವಾರ) ಗಣೇಶ ಚತುರ್ಥಿ ಸಂಭ್ರಮದಿಂದ ನಡೆಯುತ್ತಿದೆ.
ಉಡುಪಿ ಜಿಲ್ಲಾದ್ಯಂತ ಒಟ್ಟು 486 ಕಡೆ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ. ಇದರಲ್ಲಿ 77 ಸೂಕ್ಷ್ಮ, 3 ಅತೀ ಸೂಕ್ಷ್ಮ ಹಾಗೂ 406 ಸಾಮಾನ್ಯ ಸ್ಥಳವಾಗಿ ಪೊಲೀಸ್ ಇಲಾಖೆ ಗುರುತಿಸಿದೆ.
ಉಡುಪಿ ನಗರ ಠಾಣೆ 27, ಮಣಿಪಾಲ 18, ಮಲ್ಪೆ 19, ಬ್ರಹ್ಮಾವರ 47, ಕೋಟ 43, ಹಿರಿಯಡಕ 11, ಕುಂದಾಪುರ 34, ಶಂಕರನಾರಾಯಣ 31, ಕುಂದಾಪುರ (ಗ್ರಾ.) 25, ಅಮಾಸೆಬೈಲು 9, ಬೈಂದೂರು 47, ಗಂಗೊಳ್ಳಿ 31, ಕೊಲ್ಲೂರು 13, ಪಡುಬಿದ್ರಿ 14, ಶಿರ್ವ 14, ಕಾಪು 16, ಕಾರ್ಕಳ (ಗ್ರಾ.) 26, ಅಜೆಕಾರು 12, ಹೆಬ್ರಿ 21, ಕಾರ್ಕಳ ನಗರ 28 ಕಡೆಗಳಲ್ಲಿ ಗಣೇಶೋತ್ಸವ ನಡೆಯಲಿದೆ.
ಉಡುಪಿ ಜಿಲ್ಲೆಯ ಗಣೇಶ ಪೆಂಡಾಲು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ದೇವಸ್ಥಾನ, ಸಂಘ ಸಂಸ್ಥೆಗಳ ವಠಾರದಲ್ಲಿ ಹಬ್ಬದ ಉತ್ಸವಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಿಮಿತ್ತ ಹೂ, ಹಣ್ಣು, ಕಬ್ಬು ಮಾರಾಟ ಭರಾಟೆಯೂ ಜೋರಾಗಿತ್ತು. ಬಹುತೇಕ ಕಡೆ ಮಂಗಳ ವಾರ ಸಂಜೆಯೇ ಗಣೇಶನ ಮೂರ್ತಿ ತಂದಿಡಲಾಗಿದ್ದು, ಬುಧವಾರ ಬೆಳಗ್ಗೆ ಪ್ರತಿಷ್ಠಾಪನೆ, ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
“ಪೊಲೀಸ್ ಬಂದೋಬಸ್ತ್:”
ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂದೋಬಸ್ತ್ ಗಾಗಿ ಈಗಾಗಲೇ ಪೊಲೀಸರು ಸನ್ನದ್ಧರಾಗಿದ್ದಾರೆ. ಪೊಲೀಸ್ ಅಧಿಕಾರಿ, ಸಿಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು. ರಾಜ್ಯ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಸಿದ್ಧವಾಗಿದೆ. ವಿವಿಧೆಡೆ ನಡೆಯುವ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.