ಉದಯಪುರ: ಉದಯಪುರದ ಪೆಸಿಫಿಕ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಕಾಲೇಜು ಸಿಬ್ಬಂದಿಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ನಂತರ, ವಿದ್ಯಾರ್ಥಿಗಳು ಕಾಲೇಜು ಆಡಳಿತದ ವಿರುದ್ಧ ಹಲವು ಆರೋಪಗಳನ್ನು ಮಾಡಿ, ಕ್ಯಾಂಪಸ್‌ನಲ್ಲಿ ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ.
25 ವರ್ಷದ ಶ್ವೇತಾ ಸಿಂಗ್, ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿದ್ದು, ಅಂತಿಮ ವರ್ಷದ ಬಿಡಿಎಸ್(ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ವ್ಯಾಸಂಗ ಮಾಡುತ್ತಿದ್ದರು. ಗುರುವಾರ ರಾತ್ರಿ ಸುಮಾರು 11 ಗಂಟೆಗೆ ಅವರ ರೂಮ್‌ಮೇಟ್ ಕೋಣೆಗೆ ಬಂದಾಗ ಶ್ವೇತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಆತ್ಮಹತ್ಯೆ ಪತ್ರದಲ್ಲಿ ಗಂಭೀರ ಆರೋಪಗಳು
ಘಟನಾ ಸ್ಥಳದಲ್ಲಿ ಸಿಕ್ಕ ಕೈಬರಹದ ಪತ್ರದಲ್ಲಿ, ಕಾಲೇಜಿನ ಸಿಬ್ಬಂದಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯಲ್ಲಿನ ಅಕ್ರಮಗಳು, ವಿದ್ಯಾರ್ಥಿಗಳನ್ನು ಮನಸೋಇಚ್ಛೆ ಫೇಲ್ ಮಾಡುವುದು ಮತ್ತು ಪದೇ ಪದೇ ಹಣಕ್ಕಾಗಿ ಬೇಡಿಕೆ ಇಡುವುದು ಮುಂತಾದ ಗಂಭೀರ ಆರೋಪಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಣ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಗುರಿಯಾಗಿಸಿಕೊಂಡು ಒತ್ತಡ ಹೇರುತ್ತಿತ್ತು ಎಂದೂ ಪತ್ರದಲ್ಲಿ ಹೇಳಲಾಗಿದೆ. “ನೈನಿ ಮ್ಯಾಮ್ ಮತ್ತು ಭಾಗವತ್ ಸರ್” ಎಂಬ ಇಬ್ಬರು ಸಿಬ್ಬಂದಿ ಕಳೆದ ಎರಡು ವರ್ಷಗಳಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಶ್ವೇತಾ ಪತ್ರದಲ್ಲಿ ಹೆಸರಿಸಿದ್ದಾರೆ.
ರೊಚ್ಚಿಗೆದ್ದ ವಿದ್ಯಾರ್ಥಿಗಳು
ಶ್ವೇತಾ ಸಿಂಗ್ ಆತ್ಮಹತ್ಯೆಯು ವಿದ್ಯಾರ್ಥಿಗಳನ್ನು ರೊಚ್ಚಿಗೆಬ್ಬಿಸಿದ್ದು, ವಿದ್ಯಾರ್ಥಿಗಳು ಕಾಲೇಜಿನ ಗೇಟ್‌ನ ಹೊರಗೆ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಮುಖ್ಯ ದ್ವಾರವನ್ನು ತಡೆದು ಧರಣಿ ನಡೆಸಿದ ವಿದ್ಯಾರ್ಥಿಗಳು, ಡೆತ್‌ನೋಟ್‌ನಲ್ಲಿ ಹೆಸರಿಸಲಾದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಾಜರಾತಿ ಮತ್ತು ಪರೀಕ್ಷೆಗಳ ವಿಷಯದಲ್ಲಿ ಆಡಳಿತವು ನಿರಂತರವಾಗಿ ಒತ್ತಡ ಹೇರುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಆರೋಪ ಹೊತ್ತ ಇಬ್ಬರು ಸಿಬ್ಬಂದಿಯನ್ನು ಕಾಲೇಜು ಆಡಳಿತವು ವಜಾಗೊಳಿಸಿದೆ. ಸುಖೇರ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯ ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.