ನವದೆಹಲಿ: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, ಅಂಡರ್-19 ವಿಶ್ವಕಪ್ ಹೀರೊ ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸಿದ್ಧತೆಗಾಗಿ, ಈ ವರ್ಷದ ತಮ್ಮ 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ತ್ಯಜಿಸಲು ನಿರ್ಧರಿಸಿದ್ದಾರೆ.
ಬಿಹಾರದ ತಾಜ್‌ಪುರ ಮೂಲದವರಾದ ವೈಭವ್, ಬಿಹಾರ ಶಾಲಾ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯನ್ನು ಬರೆಯಬೇಕಿತ್ತು. ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 17ರಿಂದ ಮಾರ್ಚ್ 11ರವರೆಗೆ ಪರೀಕ್ಷೆಗಳು ನಡೆಯಲಿವೆ. ವೈಭವ್ ಅವರಿಗೆ ‘ಪೊದ್ದಾರ್ ಇಂಟರ್‌ನ್ಯಾಷನಲ್ ಸ್ಕೂಲ್’ನಲ್ಲಿ ಪರೀಕ್ಷಾ ಕೇಂದ್ರವನ್ನೂ ನಿಗದಿಪಡಿಸಲಾಗಿತ್ತು. ಆದರೆ, ಕ್ರಿಕೆಟ್ ಮೈದಾನದಲ್ಲಿನ ಬಿಡುವಿಲ್ಲದ ವೇಳಾಪಟ್ಟಿ ಮತ್ತು ಐಪಿಎಲ್ ಬದ್ಧತೆಯ ಕಾರಣದಿಂದಾಗಿ ಅವರು ಪರೀಕ್ಷೆಗೆ ಗೈರಾಗಲಿದ್ದಾರೆ
ಐಪಿಎಲ್ ಅಭ್ಯಾಸದಲ್ಲಿ ಮಗ್ನ
ಈ ಬಗ್ಗೆ ಸ್ಪಷ್ಟನೆ ನೀಡಿರುವ ವೈಭವ್ ಅವರ ಕೋಚ್ ಮನೀಷ್ ಓಜಾ, “ವೈಭವ್ ಅವರು ಈ ಬಾರಿ 10ನೇ ತರಗತಿ ಪರೀಕ್ಷೆಗೆ ಹಾಜರಾಗುತ್ತಿಲ್ಲ. ಅವರು ಪ್ರಸ್ತುತ ನಾಗ್ಪುರದಲ್ಲಿದ್ದು, ರಾಜಸ್ಥಾನ್ ರಾಯಲ್ಸ್ (RR) ತಂಡ ಆಯೋಜಿಸಿರುವ ಐಪಿಎಲ್ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ,” ಎಂದು ತಿಳಿಸಿದ್ದಾರೆ. ಮಾರ್ಚ್ 26ರಿಂದ ಐಪಿಎಲ್ 2026 ಆರಂಭವಾಗಲಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಅಸ್ತ್ರವಾಗಿ ವೈಭವ್ ಗುರುತಿಸಿಕೊಂಡಿದ್ದಾರೆ.
ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಕೂಡ ಈ ನಿರ್ಧಾರವನ್ನು ದೃಢಪಡಿಸಿದ್ದು, “ಸದ್ಯಕ್ಕೆ ವೈಭವ್ ಅವರ ಸಂಪೂರ್ಣ ಗಮನ ಕ್ರಿಕೆಟ್ ಮೇಲಿದೆ. ಅವರು ಮುಂದಿನ ವರ್ಷ ಬೋರ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ,” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂಡರ್-19 ವಿಶ್ವಕಪ್ ಹೀರೊ
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ವೈಭವ್ ಅವರ ಪ್ರದರ್ಶನ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿತ್ತು. ಇಂಗ್ಲೆಂಡ್ ವಿರುದ್ಧದ ಫೈನಲ್ ಕಾದಾಟದಲ್ಲಿ ಕೇವಲ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳ ಸಮೇತ 175 ರನ್ ಸಿಡಿಸಿದ್ದರು. ಇವರ ಈ ಅಬ್ಬರದ ಆಟದಿಂದ ಭಾರತ ಕಿರಿಯರ ತಂಡ 411 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.
ಅಲ್ಲದೆ, ಕಳೆದ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಬಾರಿಸಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಬಾರಿಯ ಟೂರ್ನಿಯಲ್ಲಿ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
ಇದನ್ನೂ ಓದಿ : ‘ವರ್ಷದ ಭಾರತೀಯ ಕ್ರೀಡಾಪಟು’ ಗೌರವಕ್ಕೆ ಭಾಜನರಾದ ಸ್ಮೃತಿ ಮಂಧಾನ : ಆರ್‌ಸಿಬಿ ನಾಯಕಿಗೆ ಮತ್ತೊಂದು ಗರಿ



















