17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಗೆ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಭಾರತದ ಆಟಗಾರ್ತಿ ದಾಖಲೆ ಬರೆದಿದ್ದಾರೆ.
ಮೊದಲ ದಿನ ಪದಕ ಗೆಲ್ಲುವಲ್ಲಿ ಭಾರತೀಯ ಆಟಗಾರರು ವಿಫಲರಾದರು. ಆದರೆ, ಎರಡೂ ಕೈಗಳಿಲ್ಲದ ಆಟಗಾರ್ತಿ ಮಾತ್ರ ದಾಖಲೆ ಬರೆದಿದ್ದಾರೆ. ಹಲವು ಭಾರತೀಯ ಆಟಗಾರರು ಉತ್ತಮ ಆರಂಭ ಪಡೆದಿದ್ದು, ದೇಶಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಎರಡು ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಭಾರತದ ಶೀತಲ್ ದೇವಿ ರ್‍ಯಾಂಕಿಂಗ್ ಸುತ್ತಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
17 ವರ್ಷದ ಶೀತಲ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರ್‍ಯಾಂಕಿಂಗ್ ಸುತ್ತಿನಲ್ಲಿ 720ರ ಪೈಕಿ 703 ಅಂಕ ಗಳಿಸಿದರೆ, ಟರ್ಕಿಯ ಒಜ್ಜುರ್ ಗಿರ್ಡಿ ಕ್ಯೂರ್ 704 ಅಂಕ ಗಳಿಸಿದರು. ಈ ಸಾಧನೆ ಪ್ಯಾರಾಲಿಂಪಿಕ್ಸ್ ಹಾಗೂ ವಿಶ್ವ ದಾಖಲೆ ಎನಿಸಿಕೊಂಡಿವೆ. ಭಾರತದ ಶೀತಲ್ ದೇವಿ 698 ಅಂಕಗಳನ್ನು ಗಳಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು.
2021 ರಲ್ಲಿ ಬ್ರಿಟನ್ ನ ಸ್ಟೆಟನ್ ಜೆಸ್ಸಿಕಾ 694 ಅಂಕಗಳಿಸಿದ್ದು ಪ್ಯಾರಾಲಿಂಪಿಕ್ಸ್ ದಾಖಲೆಯಾಗಿತ್ತು. ಸದ್ಯ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು ದಾಖಲೆ ಬರೆದಿದ್ದಾರೆ. ರ್‍ಯಾಂಕಿಂಗ್ ಸುತ್ತಿನಲ್ಲಿ ಅಗ್ರ ಸ್ಥಾನ ಗಳಿಸಿರುವ ಟರ್ಕಿಯ ಒಜ್ಜುರ್, 2ನೇ ಸ್ಥಾನ ಗಳಿಸಿದ ಶೀತಲ್ ಅಂತಿಮ 16ರ ಘಟ್ಟಕ್ಕೆ ನೇರ ಪ್ರವೇಶ ಪಡೆದಿದ್ದಾರೆ.
ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದಿದ್ದ ಶೀತಲ್ ದೇವಿ, ಚೊಚ್ಚಲ ಪ್ಯಾರಾಲಿಂಪಿಕ್ಸ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಈಗ ಅಂತಿಮ 16ರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಹಿಂದಿನ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಶೂಟರ್ ಅವನಿ ಲೇಖರಾ ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ, ಮನೀಶ್ ನರ್ವಾಲ್ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಶುಕ್ರವಾರವೇ ಪದಕ ಸ್ಪರ್ಧೆ ನಡೆಯಲಿವೆ. ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಸಾಕ್ಷಿ, ಕರಮ್ ಜ್ಯೋತಿ, ಮಹಿಳೆಯರ 100 ಮೀ. ಓಟದಲ್ಲಿ ಪ್ರೀತಿ ಪಾಲ್, ಪುರುಷರ ಶಾಟ್ ಪುಟ್ ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ.
ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಸಿಕ್ಕಿದೆ. ಸಿಂಗಲ್ಸ್ ನಲ್ಲಿ ಒಟ್ಟು 8 ಜನ ಗೆಲುವು ಕಂಡಿದ್ದಾರೆ. ಮಿಶ್ರ ಡಬಲ್ಸ್ ನಲ್ಲಿ ಭಾರತದವರೇ ಆಗಿದ್ದ ಸುಹಾಸ್ -ಪಾಲಕ್ ಕೊಹ್ಲಿ ವಿರುದ್ಧ ನಿತೀಶ್ ಕುಮಾರ್ – ತುಳಸಿಮತಿ ಮುರುಗೇಶನ್ ಜೋಡಿ ಗೆಲುವು ಸಾಧಿಸಿತು.