ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಉಂಟಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (AMMK) ಮುಖ್ಯಸ್ಥ ಟಿಟಿವಿ ದಿನಕರನ್, ಈಗ ಮತ್ತೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎಗೆ ಮರಳಿದ್ದಾರೆ.
ಮತ್ತೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿನಕರನ್, “ರಾಜಿ ಮಾಡಿಕೊಂಡವರು ಎಂದಿಗೂ ಸೋಲಲಾರರು. ಇದೊಂದು ಹೊಸ ಆರಂಭ. ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ನಾವು ಶ್ರಮಿಸುತ್ತೇವೆ. ತ್ಯಾಗ ಮಾಡಿದವರು ಎಂದಿಗೂ ಕೆಳಕ್ಕೆ ಬೀಳುವುದಿಲ್ಲ ಎಂಬುದನ್ನು ನಾನು ಹೇಳಬಯಸುತ್ತೇನೆ. ಜಯಲಲಿತಾ ಅವರ ನಿಜವಾದ ಅನುಯಾಯಿಗಳಾಗಿ ನಾವೆಲ್ಲರೂ ಒಂದಾಗಿ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರ “ಅಹಂಕಾರ”ವನ್ನು ದೂರಿ ಅವರು ಮೈತ್ರಿಯಿಂದ ಹೊರಬಂದಿದ್ದರು ಎಂಬುದು ಗಮನಾರ್ಹ.
ಮೈತ್ರಿ ಬದಲಾವಣೆಯ ಹಾದಿ
2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿದ್ದ ದಿನಕರನ್, ಕಳೆದ ಸೆಪ್ಟೆಂಬರ್‌ನಲ್ಲಿ ಮೈತ್ರಿಯಿಂದ ದೂರ ಸರಿದಿದ್ದರು. ಆ ಬಳಿಕ ಅವರು ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಜೊತೆ ಕೈಜೋಡಿಸಲು ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ಆ ಮಾತುಕತೆಗಳು ಫಲಪ್ರದವಾಗದ ಕಾರಣ, ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಾ ಅವರು ದಿನಕರನ್ ಅವರನ್ನು ಮತ್ತೆ ಮೈತ್ರಿಕೂಟಕ್ಕೆ ಆಹ್ವಾನಿಸಿದ್ದರು ಎಂದು ತಿಳಿದುಬಂದಿದೆ.
ದಕ್ಷಿಣ ತಮಿಳುನಾಡಿನ ಮತಗಳ ಮೇಲೆ ಕಣ್ಣು
ಟಿಟಿವಿ ದಿನಕರನ್ ಅವರ ಮರುಸೇರ್ಪಡೆಯು ಬಿಜೆಪಿಗೆ ದಕ್ಷಿಣ ತಮಿಳುನಾಡಿನಲ್ಲಿ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಪ್ರಭಾವಿಯಾಗಿರುವ ‘ತೇವರ್’ ಸಮುದಾಯದ ಮತಗಳನ್ನು ಸೆಳೆಯಲು ದಿನಕರನ್ ನೆರವಾಗಲಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಇದೇ ಸಮುದಾಯದ ಮತ್ತೊಬ್ಬ ನಾಯಕ ಓ. ಪನ್ನೀರ್ ಸೆಲ್ವಂ ಅವರ ಆಪ್ತರು ಡಿಎಂಕೆ ಮತ್ತು ಟಿವಿಕೆ ಸೇರುತ್ತಿರುವ ಹಿನ್ನೆಲೆಯಲ್ಲಿ, ದಿನಕರನ್ ಅವರ ಆಗಮನ ಎನ್‌ಡಿಎಗೆ ಆನೆಬಲ ತಂದಿದೆ.
ಮೋದಿ ಕಾರ್ಯಕ್ರಮದಲ್ಲಿ ಭಾಗಿ
ಮುಂಬರುವ ಶುಕ್ರವಾರ ಚೆನ್ನೈ ಸಮೀಪ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಟಿಟಿವಿ ದಿನಕರನ್ ಭಾಗವಹಿಸಲಿದ್ದಾರೆ. ಈ ವೇದಿಕೆಯಲ್ಲಿ ಎಡಪ್ಪಾಡಿ ಪಳನಿಸ್ವಾಮಿ, ಅನ್ಬುಮಣಿ ರಾಮದಾಸ್, ಜಿ.ಕೆ. ವಾಸನ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ | ರಾಷ್ಟ್ರಗೀತೆಗೆ ಅವಮಾನ ಆರೋಪಿಸಿ ಅರ್ಧಕ್ಕೇ ಹೊರನಡೆದ ರಾಜ್ಯಪಾಲ



















