ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ನೀಡಿರುವ ವಿವಾದಾತ್ಮಕ ಎನ್ನಲಾದ ಹೇಳಿಕೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ನಡೆಸಿದ ವಾರಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ “ಸೂಕ್ತ ಕ್ರಮ” ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿವಾದಿತ ವೀಡಿಯೊದಲ್ಲಿ ಏನಿದೆ?
ಕಳೆದ ಅಕ್ಟೋಬರ್‌ನಲ್ಲಿ ನಡೆದ ಸುದ್ದಿಗೋಷ್ಠಿಯ ಹಳೆಯ ವಿಡಿಯೋ ತುಣುಕೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲಿ ಟ್ರಂಪ್ ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸುತ್ತಾ, “ಮೋದಿ ಒಬ್ಬ ಶ್ರೇಷ್ಠ ವ್ಯಕ್ತಿ, ಅವರು ಟ್ರಂಪ್ ಅನ್ನು ಪ್ರೀತಿಸುತ್ತಾರೆ,” ಎಂದು ಹೇಳಿರುವುದಷ್ಟೇ ಅಲ್ಲದೆ, “ನಾನು ಅವರ ರಾಜಕೀಯ ಜೀವನವನ್ನು ನಾಶಪಡಿಸಲು ಇಷ್ಟಪಡುವುದಿಲ್ಲ. ಆದರೆ ನೀವು ಅರ್ಥಮಾಡಿಕೊಳ್ಳಬೇಕು, ನಾನು ಹಲವು ವರ್ಷಗಳಿಂದ ಭಾರತವನ್ನು ಗಮನಿಸುತ್ತಿದ್ದೇನೆ,” ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದ್ದರು. ಈ ‘ಪ್ರೀತಿ’ ಎಂಬ ಪದವನ್ನು ಬೇರೆ ಅರ್ಥದಲ್ಲಿ ತೆಗೆದುಕೊಳ್ಳಬೇಡಿ ಎಂದೂ ಅವರು ಸ್ಪಷ್ಟಪಡಿಸಿದ್ದರು.
ಸತ್ಯಾಸತ್ಯತೆ ಪರಿಶೀಲನೆಗೆ ಸೂಚನೆ
ಈ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ರಣಧೀರ್ ಜೈಸ್ವಾಲ್, “ನಾನು ಈ ವಿಡಿಯೋವನ್ನು ಇನ್ನೂ ನೋಡಿಲ್ಲ. ಒಂದು ವೇಳೆ ಅಂತಹ ವೀಡಿಯೊ ಇರುವುದು ನಿಜವಾಗಿದ್ದರೆ ಮತ್ತು ಅದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ಪರಿಶೀಲಿಸಿದ ನಂತರ ನಾವು ಖಂಡಿತವಾಗಿಯೂ ಅದರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿಯವರ ವರ್ಚಸ್ಸಿಗೆ ಧಕ್ಕೆ ತರುವ ಅಥವಾ ರಾಜತಾಂತ್ರಿಕ ಸಂಬಂಧಗಳ ಮೇಲೆ ಪ್ರಭಾವ ಬೀರುವ ಇಂತಹ ವಿಷಯಗಳ ಬಗ್ಗೆ ಭಾರತ ಜಾಗರೂಕವಾಗಿದೆ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.
ಇದೇ ವೇಳೆ ಭಾರತ ಮತ್ತು ಅಮೆರಿಕದ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ಅಮೆರಿಕ ಬಿಡುಗಡೆ ಮಾಡಿದ ‘ಫ್ಯಾಕ್ಟ್‌ಶೀಟ್'(ಮಾಹಿತಿ ಪತ್ರ)ನಲ್ಲಿ ಮಾಡಲಾದ ತಿದ್ದುಪಡಿಗಳು ಉಭಯ ದೇಶಗಳ ನಡುವಿನ ಪರಸ್ಪರ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಫೆ.7ರಂದು ಬಿಡುಗಡೆಯಾದ ಜಂಟಿ ಹೇಳಿಕೆಯೇ ಈ ಒಪ್ಪಂದಕ್ಕೆ ಅಡಿಪಾಯವಾಗಿದ್ದು, ಎರಡೂ ದೇಶಗಳು ಈ ಚೌಕಟ್ಟನ್ನು ಜಾರಿಗೆ ತರಲು ಶ್ರಮಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಷ್ಯಾ ಜೊತೆಗಿನ ಸಂಬಂಧ ಅಬಾಧಿತ
ಇದೇ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಮಾತನಾಡಿದ ಜೈಸ್ವಾಲ್ ಅವರು, ವ್ಯಾಪಾರದಿಂದ ಹಿಡಿದು ಸಾಂಸ್ಕೃತಿಕ ವಿನಿಮಯ ಮತ್ತು ರಕ್ಷಣಾ ಕ್ಷೇತ್ರದವರೆಗೆ ಎರಡೂ ದೇಶಗಳ ನಡುವಿನ ಸಹಕಾರ ನಿರಂತರವಾಗಿ ಬೆಳೆಯುತ್ತಿದೆ ಮತ್ತು ಮುಂದೆಯೂ ಇದು ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅನ್ವಯ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಇದನ್ನೂ ಓದಿ : ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ | ಒಂದೇ ದಿನ 2,400 ರೂ. ಇಳಿಕೆ, ಬೆಳ್ಳಿಯೂ ಅಗ್ಗ!



















