ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ.50 ಸುಂಕ ವಿಧಿಸುವ ಘೋಷಣೆ ಬೆನ್ನಲ್ಲೇ, ವಾಲ್ಮಾರ್ಟ್, ಅಮೆಜಾನ್, ಟಾರ್ಗೆಟ್ ಮತ್ತು ಗ್ಯಾಪ್‌ನಂತಹ ಅಮೆರಿಕದ ಪ್ರಮುಖ ಚಿಲ್ಲರೆ ವ್ಯಾಪಾರ ಸಂಸ್ಥೆಗಳು ಭಾರತೀಯ ರಫ್ತುದಾರರಿಂದ ಆರ್ಡರ್‌ಗಳನ್ನು ಸ್ಥಗಿತಗೊಳಿಸಿವೆ. ಅಮೆರಿಕದ ಖರೀದಿದಾದರು ಭಾರತೀಯ ರಫ್ತುದಾರರಿಗೆ ಇಮೇಲ್ ಮತ್ತು ಪತ್ರಗಳನ್ನು ಕಳುಹಿಸಿ ಮುಂದಿನ ಸೂಚನೆ ಬರುವವರೆಗೂ ಉಡುಪು ಮತ್ತು ಜವಳಿ ರಫ್ತುಗಳನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದ್ದಕ್ಕೆ ಪ್ರತೀಕಾರವಾಗಿ ಇತ್ತೀಚೆಗೆ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿ ಆದೇಶ ಹೊರಡಿಸಿದ್ದರು. ಈ ಹೊಸ ಸುಂಕವು ಎರಡು ಹಂತಗಳಲ್ಲಿ ಜಾರಿಗೆ ಬರಲಿದೆ. ಆರಂಭಿಕ ಶೇ.25 ಸುಂಕವು ಆಗಸ್ಟ್ 7ರ ಗುರುವಾರದಿಂದಲೇ ಜಾರಿಗೆ ಬಂದಿದ್ದು, ಹೆಚ್ಚುವರಿ ಶೇ.25 ಸುಂಕವು ಆಗಸ್ಟ್ 28ರಿಂದ ಜಾರಿಗೆ ಬರಲಿದೆ.
ಆರ್ಥಿಕ ಪರಿಣಾಮ:
ಸುಂಕ ಏರಿಕೆಯಿಂದಾಗಿ ಭಾರತದ ಸರಕುಗಳ ಬೆಲೆ ಶೇ.30 ರಿಂದ 35ರಷ್ಟು ಹೆಚ್ಚಾಗಲಿದೆ. ಇದು ಅಮೆರಿಕಕ್ಕೆ ಕಳುಹಿಸುವ ಆರ್ಡರ್‌ಗಳಲ್ಲಿ ಶೇ.40 ರಿಂದ 50ರಷ್ಟು ಕುಸಿತಕ್ಕೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಭಾರತಕ್ಕೆ 4-5 ಶತಕೋಟಿ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಅಮೆರಿಕನ್ ಖರೀದಿದಾರರ ನಿಲುವು: ವಾಲ್ಮಾರ್ಟ್‌ನಂತಹ ಖರೀದಿದಾರರು ಹೆಚ್ಚಿದ ವೆಚ್ಚದ ಹೊರೆಯನ್ನು ಭರಿಸಲು ಸಿದ್ಧರಿಲ್ಲ. ಬದಲಾಗಿ, ಅದರ ಆರ್ಥಿಕ ಪರಿಣಾಮವನ್ನು ರಫ್ತುದಾರರೇ ಹೊರಬೇಕು ಎಂದು ಭಾರತೀಯ ಕಂಪನಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಭಾರತೀಯ ರಫ್ತುದಾರರ ಮೇಲೆ ಪರಿಣಾಮ
ಮುಖ್ಯ ರಫ್ತು ವಲಯಗಳಿಗೆ ಹೊಡೆತ: ವೆಲ್ಸ್‌ಪನ್ ಲಿವಿಂಗ್, ಗೋಕುಲ್‌ದಾಸ್ ಎಕ್ಸ್‌ಪೋರ್ಟ್ಸ್, ಇಂಡೋ ಕೌಂಟ್ ಮತ್ತು ಟ್ರೈಡೆಂಟ್‌ನಂತಹ ಪ್ರಮುಖ ರಫ್ತು ಸಂಸ್ಥೆಗಳಿಗೆ ಯುಎಸ್ ಮಾರುಕಟ್ಟೆ ಆದಾಯದ ಶೇ.40 ರಿಂದ 70ರಷ್ಟನ್ನು ಒದಗಿಸುತ್ತದೆ. ಈ ಸುಂಕದಿಂದಾಗಿ ಈ ಕಂಪನಿಗಳಿಗೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ.
ಸ್ಪರ್ಧಾತ್ಮಕತೆಯಲ್ಲಿ ಹಿನ್ನಡೆ: ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ಭಾರತದ ಸ್ಪರ್ಧಾತ್ಮಕ ರಾಷ್ಟ್ರಗಳು ಸುಮಾರು ಶೇ.20 ರಷ್ಟು ಕಡಿಮೆ ಸುಂಕವನ್ನು ಎದುರಿಸುತ್ತಿವೆ. ಇದರಿಂದಾಗಿ ಭಾರತೀಯ ರಫ್ತುದಾರರು ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ರಫ್ತು ಮಾರುಕಟ್ಟೆ: ಆರ್ಥಿಕ ವರ್ಷ 2024-25ರಲ್ಲಿ ಭಾರತದ ಒಟ್ಟು ಜವಳಿ ಮತ್ತು ಉಡುಪು ರಫ್ತುಗಳಲ್ಲಿ ಶೇ.28ರಷ್ಟು ಅಂದರೆ 36.61 ಶತಕೋಟಿ ಡಾಲರ್ ಮೌಲ್ಯದ ಸರಕು ಅಮೆರಿಕಕ್ಕೆ ರಫ್ತಾಗಿದ್ದವು.
ಈ ಸುಂಕ ಹೆಚ್ಚಳವು ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಿಗೆ ಗಂಭೀರ ಹೊಡೆತ ನೀಡುವ ಸಾಧ್ಯತೆಯಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸುಂಕವನ್ನು “ಅನುಚಿತ, ನ್ಯಾಯಸಮ್ಮತವಲ್ಲದ ಮತ್ತು ಅವಾಸ್ತವಿಕ” ಎಂದು ಕರೆದಿದ್ದು, ಈ ಕುರಿತು ಮಾತುಕತೆ ನಡೆಸಲು ಸಿದ್ಧವಿದೆ ಎಂದು ಹೇಳಿದೆ. ಆದರೆ ಟ್ರಂಪ್ ಆಡಳಿತವು, ವಿವಾದ ಬಗೆಹರಿಯುವವರೆಗೂ ಯಾವುದೇ ಮಾತುಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.