ನವದೆಹಲಿ: ಈಗಾಗಲೇ ರಷ್ಯಾ ಜತೆ ತೈಲ ವ್ಯಾಪಾರ ನಡೆಸುತ್ತಿರುವ ಭಾರತಕ್ಕೆ ಸುಂಕದ ಮೇಲೆ ಸುಂಕ ವಿಧಿಸುತ್ತಿರುವ ಟ್ರಂಪ್ ಇದೀಗ ಇರಾನ್ ವಿಚಾರದಲ್ಲಿ ಕೈಗೊಂಡಿರುವ ನಿರ್ಧಾರವು ಭಾರತಕ್ಕೆ ಮತ್ತಷ್ಟು ಆಘಾತ ನೀಡಿದೆ. ಜಾಗತಿಕ ಮಟ್ಟದಲ್ಲಿ ಉಕ್ರೇನ್ ಅಥವಾ ಇರಾನ್ ಹೀಗೆ ಎಲ್ಲೇ ಬಿಕ್ಕಟ್ಟು ಸಂಭವಿಸಿದರೂ ಅದರ ಪರೋಕ್ಷ ಬಿಸಿ ಭಾರತಕ್ಕೆ ತಟ್ಟುತ್ತದ. ಅದರಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಕೈಗೊಂಡಿರುವ ನಿರ್ಧಾರವು ಭಾರತವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದೆ. ಇರಾನ್ ಜೊತೆಗಿನ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದು ಭಾರತದ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ.
ವಿಶೇಷವೆಂದರೆ ಅಮೆರಿಕದ ನಿಯೋಜಿತ ರಾಯಭಾರಿ ಸರ್ಜಿಯೋ ಗೋರ್ ಅವರು ಭಾರತವನ್ನು ಅಮೆರಿಕದ ಅತ್ಯಂತ ಅಗತ್ಯ ಪಾಲುದಾರ ಎಂದು ಬಣ್ಣಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಅಧ್ಯಕ್ಷರಿಂದ ಇಂತಹದ್ದೊಂದು ಕಠಿಣ ನಿರ್ಧಾರ ಹೊರಬಿದ್ದಿದೆ. ಇರಾನ್ ಸರ್ಕಾರದ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಆ ದೇಶದ ಆರ್ಥಿಕತೆಯನ್ನು ಗುರಿಯಾಗಿಸಿ ಟ್ರಂಪ್ ಈ ಅಸ್ತ್ರ ಪ್ರಯೋಗಿಸಿದ್ದು, ಇದು ಭಾರತದಂತಹ ಮಿತ್ರರಾಷ್ಟ್ರಗಳ ಮೇಲೂ ಗಂಭೀರ ಪರಿಣಾಮ ಬೀರಲಿದೆ.
ಭಾರತದ ರಫ್ತು ವಹಿವಾಟಿಗೆ ತ್ರಿವಳಿ ಪೆಟ್ಟು
ಟ್ರಂಪ್ ಅವರ ಈ ನಿರ್ಧಾರದಿಂದಾಗಿ ಅಮೆರಿಕಕ್ಕೆ ರಫ್ತಾಗುವ ಭಾರತೀಯ ಸರಕುಗಳ ಮೇಲಿನ ಸುಂಕದ ಹೊರೆ ಗಣನೀಯವಾಗಿ ಏರಿಕೆಯಾಗುವ ಆತಂಕ ಎದುರಾಗಿದೆ. ಪ್ರಸ್ತುತ ಭಾರತ ಮತ್ತು ಅಮೆರಿಕದ ನಡುವೆ ಮುಕ್ತ ವ್ಯಾಪಾರ ಒಪ್ಪಂದವಿಲ್ಲದ ಕಾರಣ, ಭಾರತೀಯ ಸರಕುಗಳು ಈಗಾಗಲೇ ಹೆಚ್ಚಿನ ಸುಂಕವನ್ನು ಎದುರಿಸುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಪರಸ್ಪರ ಸುಂಕದ ಹೆಸರಿನಲ್ಲಿ ಶೇ.25 ಹಾಗೂ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ದಂಡನಾತ್ಮಕ ಕ್ರಮವಾಗಿ ಹೆಚ್ಚುವರಿ ಶೇ.25ರಷ್ಟು ಸುಂಕ ಜಾರಿಯಲ್ಲಿದೆ. ಈಗ ಇರಾನ್ ಜೊತೆಗಿನ ವ್ಯಾಪಾರ ಸಂಬಂಧಕ್ಕಾಗಿ ಮತ್ತೆ ಶೇ.25ರಷ್ಟು ಸುಂಕ ಸೇರಿದರೆ, ಒಟ್ಟಾರೆ ಭಾರತೀಯ ಸರಕುಗಳ ಮೇಲೆ ಶೇ.75ರಷ್ಟು ಭಾರೀ ಸುಂಕ ಬೀಳುವ ಸಾಧ್ಯತೆಯಿದೆ. ಟ್ರಂಪ್ ಅವರು ಈ ಆದೇಶ ಅಂತಿಮ ಮತ್ತು ನಿರ್ಣಾಯಕ ಎಂದು ಸ್ಪಷ್ಟಪಡಿಸಿರುವುದು ಭಾರತೀಯ ರಫ್ತುದಾರರಲ್ಲಿ ನಡುಕ ಹುಟ್ಟಿಸಿದೆ.
ಒಪ್ಪಂದಕ್ಕಾಗಿ ಒತ್ತಡದ ತಂತ್ರವೇ?
ಟ್ರಂಪ್ ಅವರ ಈ ಘೋಷಣೆಯ ಸಮಯವು ರಾಜತಾಂತ್ರಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಭಾರತ ಮತ್ತು ಅಮೆರಿಕದ ಅಧಿಕಾರಿಗಳು ದೀರ್ಘಕಾಲದಿಂದ ಬಾಕಿ ಉಳಿದಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಸಿದ್ಧರಾಗುತ್ತಿದ್ದ ಸಂದರ್ಭದಲ್ಲೇ ಈ ಹೊಸ ಸುಂಕದ ಘೋಷಣೆ ಹೊರಬಿದ್ದಿದೆ. ಇದು ಕೇವಲ ಇರಾನ್ ಮೇಲಿನ ಸಿಟ್ಟು ಮಾತ್ರವಲ್ಲದೆ, ಭಾರತವನ್ನು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಮತ್ತು ಅಮೆರಿಕದ ಷರತ್ತುಗಳಿಗೆ ಒಪ್ಪುವಂತೆ ಮಾಡಲು ಬಳಸುತ್ತಿರುವ ಒತ್ತಡದ ತಂತ್ರ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇರಾನ್ ಜೊತೆ ಭಾರತದ ವಾಣಿಜ್ಯ ನಂಟು
ಚೀನಾ ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದರೂ, ಭಾರತವೂ ಟೆಹ್ರಾನ್‌ನ ಪ್ರಮುಖ ಐದು ವಾಣಿಜ್ಯ ಮಿತ್ರರಲ್ಲಿ ಒಂದಾಗಿದೆ. 2024-25ನೇ ಸಾಲಿನಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಸುಮಾರು 1.68 ಬಿಲಿಯನ್ ಡಾಲರ್‌ಗಳಷ್ಟಿತ್ತು. ಭಾರತವು ಪ್ರಮುಖವಾಗಿ ಬಾಸ್ಮತಿ ಅಕ್ಕಿ, ಸಕ್ಕರೆ, ಚಹಾ, ಔಷಧಗಳು ಹಾಗೂ ಮಾಂಸದ ಉತ್ಪನ್ನಗಳನ್ನು ಇರಾನ್‌ಗೆ ರಫ್ತು ಮಾಡುತ್ತಿದ್ದರೆ, ಮೆಥನಾಲ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದ ಹೊಸ ಆದೇಶ ಕಟ್ಟುನಿಟ್ಟಾಗಿ ಜಾರಿಯಾದರೆ, ಭಾರತೀಯ ಕಂಪನಿಗಳು ಅಮೆರಿಕದ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಇರಾನ್ ಜೊತೆಗಿನ ವ್ಯಾಪಾರವನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಇದು ಕೃಷಿ ಮತ್ತು ಔಷಧ ವಲಯದ ಮೇಲೆ ನೇರ ಪರಿಣಾಮ ಬೀರಲಿದೆ.
ಚಬಹಾರ್ ಬಂದರು ಮತ್ತು ರಷ್ಯಾ ತೈಲದ ಭೀತಿ
ಈ ಹೊಸ ಬೆಳವಣಿಗೆಯು ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲದೆ, ಭಾರತದ ವ್ಯೂಹಾತ್ಮಕ ಯೋಜನೆಗಳ ಮೇಲೂ ಕರಿನೆರಳು ಬೀರಲಿದೆ. ಪಾಕಿಸ್ತಾನವನ್ನು ಅವಲಂಬಿಸದೆ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾವನ್ನು ತಲುಪಲು ಭಾರತ ನಿರ್ಮಿಸುತ್ತಿರುವ ಚಬಹಾರ್ ಬಂದರು ಯೋಜನೆಗೆ ಅಮೆರಿಕ ಹಿಂದೆ ವಿನಾಯಿತಿ ನೀಡಿತ್ತು. ಆದರೆ ಟ್ರಂಪ್ ಅವರ ಸದ್ಯದ ಆಕ್ರಮಣಕಾರಿ ಧೋರಣೆಯು ಈ ಯೋಜನೆಯ ಭವಿಷ್ಯವನ್ನೂ ಅತಂತ್ರಗೊಳಿಸಿದೆ. ಇದರೊಂದಿಗೆ, ನಿರ್ಬಂಧಗಳ ಹೊರತಾಗಿಯೂ ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಶೇ. 500ರಷ್ಟು ಸುಂಕ ವಿಧಿಸುವ ಮಸೂದೆಗೂ ಟ್ರಂಪ್ ಹಸಿರು ನಿಶಾನೆ ತೋರಿಸಿರುವುದು ಭಾರತಕ್ಕೆ ಮತ್ತೊಂದು ದೊಡ್ಡ ತಲೆನೊವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಟ್ರಂಪ್ ಅವರ ‘ಅಮೆರಿಕ ಫಸ್ಟ್’ ನೀತಿಯು ಭಾರತದಂತಹ ಅಭಿವೃದ್ಧಿಶೀಲ ದೇಶಗಳ ರಾಜತಾಂತ್ರಿಕ ಮತ್ತು ಆರ್ಥಿಕ ಸಮತೋಲನವನ್ನು ಹದಗೆಡಿಸುತ್ತಿದೆ.
ಇದನ್ನೂ ಓದಿ: ಬಿಜೆಪಿ ಕಚೇರಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ ಭೇಟಿ | ಮಹತ್ವದ ಮಾತುಕತೆ



















