ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಾರು(Tesla Car)ಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ನಡೆಯುತ್ತಿರುವಂತೆಯೇ, ಟೆಸ್ಲಾ ಕಾರುಗಳನ್ನು ಧ್ವಂಸಗೊಳಿಸಿದವರಿಗೆ 20 ವರ್ಷ ಜೈಲು ಖಚಿತ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತ ಪೋಸ್ಟ್ ಮಾಡಿರುವ ಅವರು, “ಟೆಸ್ಲಾವನ್ನು ಹಾಳುಮಾಡುವವರು 20 ವರ್ಷಗಳವರೆಗೆ ಜೈಲಿಗೆ ಹೋಗುವ ಉತ್ತಮ ಅವಕಾಶ ಹೊಂದಿರುತ್ತಾರೆ. ಅವರಿಗೆ ಹಣಕಾಸು ನೆರವು ನೀಡುವವರಿಗೂ ಇದೇ ಶಿಕ್ಷೆ ಕಾದಿದೆ. ನಾವು ನಿಮ್ಮನ್ನು ಹುಡುಕುತ್ತಿದ್ದೇವೆ!!” ಎಂದು ಬರೆದುಕೊಂಡಿದ್ದಾರೆ.
ಟೆಸ್ಲಾ ಆಸ್ತಿಯ ಮೇಲೆ ಇತ್ತೀಚೆಗೆ ನಡೆದ ಹಿಂಸಾತ್ಮಕ ದಾಳಿಗಳನ್ನು “ದೇಶೀಯ ಭಯೋತ್ಪಾದನೆಗಿಂತ ಕಡಿಮೆಯಿಲ್ಲ” ಎಂದು ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬೊಂಡಿ ಬಣ್ಣಿಸಿದ್ದರು. ಇದರ ಬೆನ್ನಲ್ಲೇ ಟ್ರಂಪ್ ರಿಂದ ಈ ಹೇಳಿಕೆ ಹೊರಬಿದ್ದಿದೆ. ಇಂಥ ಅಪರಾಧಗಳನ್ನು ಸಂಘಟಿಸಲು ಮತ್ತು ಧನಸಹಾಯ ಮಾಡಲು ತೆರೆಮರೆಯಲ್ಲಿ ಕಾರ್ಯನಿರ್ವಹಿಸುವವರು ಸೇರಿದಂತೆ ಈ ದಾಳಿಗಳಲ್ಲಿ ಭಾಗಿಯಾಗಿರುವವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಟ್ರಂಪ್ ಶಪಥಗೈದಿದ್ದಾರೆ.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆಯ (ಡಿಒಜಿಇ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದಾಗಿನಿಂದ, ಟೆಸ್ಲಾ ವಾಹನಗಳು, ಡೀಲರ್‌ಶಿಪ್ ಗಳು ಮತ್ತು ಚಾರ್ಜಿಂಗ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಇತ್ತೀಚೆಗೆ ಟೆಸ್ಲಾ ವಿರುದ್ಧ ಅಮೆರಿಕದಾದ್ಯಂತ ಹಲವು ಪ್ರತಿಭಟನೆಗಳೂ ನಡೆದಿವೆ. ಕಳೆದ ವಾರವಷ್ಟೇ ಟೆಸ್ಲಾ ಕಾರುಗಳನ್ನು ಗುರಿಯಾಗಿಸಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಹಲವು ಕಾರುಗಳು ಬೆಂಕಿಗಾಹುತಿಯಾಗಿದ್ದವು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಎಲಾನ್ ಮಸ್ಕ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಭರ್ಜರಿಯಾಗಿ ಪ್ರಚಾರ ನಡೆಸಿದ್ದರು. ಅವರ ಪ್ರಚಾರಕ್ಕೆ ಭಾರೀ ಪ್ರಮಾಣದ ದೇಣಿಗೆಯನ್ನೂ ನೀಡಿದ್ದರು. ಟ್ರಂಪ್‌ಗೆ ಆಪ್ತರಾಗಿ ಹೊರಹೊಮ್ಮಿರುವ ಮಸ್ಕ್ ಹಾಲಿ ಸರ್ಕಾರದಲ್ಲಿ ಉನ್ನತ ಗೌರವವನ್ನೂ ಗಳಿಸಿದ್ದು, ಕಾರ್ಯದಕ್ಷತಾ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.