ವಾಷಿಂಗ್ಟನ್: ಅಮೆರಿಕದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಮತದಾರರ ಅಸಮಾಧಾನದ ಬಿಸಿಗೆ ಮಣಿದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಮಾರು 200 ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ್ದಾರೆ. ಈ ನಿರ್ಧಾರದಿಂದಾಗಿ ಭಾರತದ ಟೀ ಬೆಳೆಗಾರರು ಮತ್ತು ಸಾಂಬಾರ ಪದಾರ್ಥಗಳ ರಫ್ತುದಾರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಟ್ರಂಪ್ ಸರ್ಕಾರದ ಈ ಹೊಸ ನಿರ್ಧಾರದಿಂದ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕರಿಮೆಣಸು, ಲವಂಗ, ಜೀರಿಗೆ, ಏಲಕ್ಕಿ, ಅರಿಶಿನ, ಶುಂಠಿಯಂತಹ ಸಾಂಬಾರ ಪದಾರ್ಥಗಳು ಹಾಗೂ ವಿವಿಧ ಬಗೆಯ ಟೀ ಮತ್ತು ಗೋಡಂಬಿ ಮೇಲಿನ ಸುಂಕ ಕಡಿಮೆಯಾಗಲಿದೆ. 2024ರಲ್ಲಿ ಭಾರತವು ಅಮೆರಿಕಕ್ಕೆ 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಸಾಂಬಾರ ಪದಾರ್ಥಗಳನ್ನು ಮತ್ತು ಸುಮಾರು 90 ಮಿಲಿಯನ್ ಡಾಲರ್ ಮೌಲ್ಯದ ಟೀಯನ್ನು ರಫ್ತು ಮಾಡಿತ್ತು. ಈ ಸುಂಕ ಕಡಿತದಿಂದಾಗಿ ಸುಮಾರು 500 ಮಿಲಿಯನ್‌ನಿಂದ 1 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಕೃಷಿ ಉತ್ಪನ್ನಗಳಿಗೆ ಅನುಕೂಲವಾಗಲಿದೆ.
ಇವುಗಳಿಗಿಲ್ಲ ವಿನಾಯಿತಿ
ಆದರೆ, ಭಾರತದಿಂದ ಅಮೆರಿಕಕ್ಕೆ ಅತಿ ಹೆಚ್ಚು ರಫ್ತಾಗುವ ಸಮುದ್ರೋತ್ಪನ್ನಗಳು (ಸೀಗಡಿ), ಬಾಸಮತಿ ಅಕ್ಕಿ, ರತ್ನ ಮತ್ತು ಆಭರಣಗಳು ಹಾಗೂ ಸಿದ್ಧ ಉಡುಪುಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. ಈ ವಸ್ತುಗಳ ಮೇಲೆ ಶೇ. 50ರಷ್ಟು ಭಾರೀ ಸುಂಕವು ಮುಂದುವರಿಯಲಿದೆ. ರಷ್ಯಾದಿಂದ ಭಾರತವು ತೈಲ ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕ ಈ ಕಠಿಣ ಸುಂಕಗಳನ್ನು 2025ರ ಆಗಸ್ಟ್‌ನಲ್ಲಿ ವಿಧಿಸಿತ್ತು.
ಟ್ರಂಪ್ ನಿರ್ಧಾರದ ಹಿಂದಿನ ಕಾರಣ
ಅಮೆರಿಕದಲ್ಲಿ ಜೀವನ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದು ಇತ್ತೀಚೆಗೆ ನಡೆದ ಕೆಲವು ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣವಾಗಿತ್ತು. “ಕೈಗೆಟುಕುವ ದರ” ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ಡೆಮಾಕ್ರಟಿಕ್ ಪಕ್ಷ ಪ್ರಚಾರ ನಡೆಸಿ ಗೆಲುವು ಸಾಧಿಸಿತ್ತು. ದೇಶದಾದ್ಯಂತ ಹೆಚ್ಚುತ್ತಿರುವ ಜನ ಸಾಮಾನ್ಯರ ಅಸಮಾಧಾನವನ್ನು ಅರಿತ ಟ್ರಂಪ್, ಇದೀಗ ಸುಂಕ ಕಡಿತದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ತೇಜಸ್ವಿ, ಸಹಚರರು ನನ್ನನ್ನು ನನ್ನ ಕುಟುಂಬದಿಂದ ಬೇರೆಯಾಗಿಸಿದರು : ಲಾಲು ಕುಟುಂಬ ತೊರೆದ ಬಳಿಕ ರೋಹಿಣಿ ಆಚಾರ್ಯ ಕಣ್ಣೀರು



















