ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾಡಿದ ಮೊದಲ ಜಂಟಿ ಅಧಿವೇಶನದ ಭಾಷಣದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಹಲವು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಟೆಕ್ಸಾಸ್‌ನ 13 ವರ್ಷದ ಬಾಲಕ ಡಿಜೆ ಡೇನಿಯಲ್ ಅವರನ್ನು ಸೀಕ್ರೆಟ್ ಸರ್ವೀಸ್ ಏಜೆಂಟ್(ಆನರರಿ) ಆಗಿ ನೇಮಕ ಮಾಡುವ ಮೂಲಕ ಇಡೀ ರಾಷ್ಟ್ರವನ್ನು ಅಚ್ಚರಿಗೆ ನೂಕಿದರು.
ಗ್ಯಾಲರಿಯಲ್ಲಿ ಡಿಜೆ ಡೇನಿಯಲ್ ಕುಳಿತಿರುವಂತೆಯೇ, ಟ್ರಂಪ್(Donald Trump) ಈ ಘೋಷಣೆ ಮಾಡಿದ್ದು, ಬಾಲಕನ ಬದುಕಿನ ಹೋರಾಟವನ್ನೂ ಜನರ ಮುಂದೆ ಬಿಚ್ಚಿಟ್ಟರು. 2018ರಿಂದ ಡೇನಿಯಲ್ ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಅವನು ಇನ್ನು ಕೇವಲ ಐದು ತಿಂಗಳು ಮಾತ್ರ ಬದುಕುವುದು ಎಂದೂ ವೈದ್ಯರು ಹೇಳಿದ್ದರು. ಆದರೆ, ಎಲ್ಲಾ ಅಡೆತಡೆಗಳ ನಡುವೆಯೂ, ಡೇನಿಯಲ್ ತನ್ನ ಕನಸನ್ನು ನುಚ್ಚುನೂರಾಗಲು ಬಿಡದೇ, ಪೊಲೀಸ್ ಅಧಿಕಾರಿಯಾಗುವ ಹಂಬಲದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾನೆ ಎಂದರು.
“ಪ್ರೀತಿಯ ಡಿಜೆ ಡೇನಿಯಲ್, ಇಂದು ರಾತ್ರಿ ನಾವು ನಿನಗೆ ಎಲ್ಲಕ್ಕಿಂತಲೂ ದೊಡ್ಡ ಗೌರವವನ್ನು ನೀಡಲಿದ್ದೇವೆ. ನಿನ್ನನ್ನು ಅಧಿಕೃತವಾಗಿ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವೀಸ್‌ನ ಏಜೆಂಟ್ ಆಗಿ ನೇಮಕ ಮಾಡಲು ನಾನು ನಮ್ಮ ಹೊಸ ಗುಪ್ತಚರ ವಿಭಾಗದ ನಿರ್ದೇಶಕ ಸೀನ್ ಕರ್ರನ್ ಅವರಿಗೆ ಸೂಚಿಸಿದ್ದೇನೆ” ಎಂದು ಟ್ರಂಪ್ ಘೋಷಿಸಿದರು.
ಇದನ್ನೂ ಓದಿ: US Tariffs: ಭಾರತದ ವಿರುದ್ಧವೂ ಸುಂಕದ ಸಮರ ಸಾರಿದ ಡೊನಾಲ್ಡ್ ಟ್ರಂಪ್; ಹೇಳಿದ್ದಿಷ್ಟು
ಈ ಘೋಷಣೆ ಮಾಡುತ್ತಿದ್ದಂತೆಯೇ ಇಡೀ ಸದನದಲ್ಲಿ ಚಪ್ಪಾಳೆಯ ಸುರಿಮಳೆ ಸುರಿಯಿತು. ಪಕ್ಷಭೇದ ಮರೆತು ಎಲ್ಲರೂ ಕರತಾಡನಗೈದರು. ಈ ಏಕತೆಯ ಅಪರೂಪದ ಕ್ಷಣದಲ್ಲಿ ರಿಪಬ್ಲಿಕನ್ನರೊಂದಿಗೆ ಡೆಮಾಕ್ರಾಟ್‌ಗಳೂ ಸೇರಿಕೊಂಡು, ಚಪ್ಪಾಳೆ ತಟ್ಟುತ್ತಾ ಎದ್ದುನಿಂತರು. ಸದನದಲ್ಲಿದ್ದ ಎಲ್ಲರೂ “ಡಿಜೆ! ಡಿಜೆ!” ಎಂದು ಕೂಗತೊಡಗಿದರು. ಅಲ್ಲೇ ಇದ್ದ ಡೇನಿಯಲ್‌ನ ತಂದೆ ಭಾವೋದ್ವೇಗದಿಂದ ಪುತ್ರನನ್ನು ಎತ್ತಿಹಿಡಿದು ಸಂಭ್ರಮಿಸಿದರು.
ಈ ವೇಳೆ ಸೀಕ್ರೆಟ್ ಸರ್ವಿಸ್ ನಿರ್ದೇಶಕ ಕರ್ರನ್ ಅವರು ಆ ಬಾಲಕನ ಬಳಿಗೆ ಬಂದು, ಅವನಿಗೆ ಅಧಿಕೃತ ಬ್ಯಾಡ್ಜ್ ಹಸ್ತಾಂತರಿಸಿದರು. ಡಿಜೆ ಡೇನಿಯಲ್ ಭಾವುಕನಾಗಿ ಕರ್ರನ್ ಅವರನ್ನು ಕೃತಜ್ಞತೆಯಿಂದ ತಬ್ಬಿಕೊಂಡಿದ್ದು ಕಂಡುಬಂತು.