ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ಅವರು ಭಾರತದ ವಿರುದ್ಧ ಮಾಡಿದ್ದ ಪೋಸ್ಟ್ ವೊಂದನ್ನು ಎಲಾನ್ ಮಸ್ಕ್ ಅವರ ಸಾಮಾಜಿಕ ಮಾಧ್ಯಮವಾದ ‘ಎಕ್ಸ್’ (ಟ್ವಿಟರ್) ನಲ್ಲಿ ಫ್ಯಾಕ್ಟ್-ಚೆಕ್ ಮಾಡಲಾಗಿದೆ. ಇದರಿಂದ ಕೆರಳಿದ ನವಾರೋ, ‘ಎಕ್ಸ್’ನ ಫ್ಯಾಕ್ಟ್-ಚೆಕ್ ಅನ್ನು “ಕಳಪೆ ಟಿಪ್ಪಣಿ” (crap note) ಎಂದು ಜರೆದಿದ್ದಾರೆ.
ನವಾರೋ ಆರೋಪವೇನು?
ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ “ಲಾಭಕೋರತನ” ನಡೆಸುತ್ತಿದೆ. ಭಾರತೀಯರೇ, ನಿಮ್ಮ ಹಣದಿಂದ ಬ್ರಾಹ್ಮಣರು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಪೀಟರ್ ನವಾರೋ ಆರೋಪಿಸಿದ್ದರು. “ಭಾರತದ ಅತಿ ಹೆಚ್ಚಿನ ಸುಂಕಗಳಿಂದ ಅಮೆರಿಕದಲ್ಲಿ ಉದ್ಯೋಗ ನಷ್ಟವುಂಟು ಮಾಡುತ್ತಿವೆ. ಭಾರತವು ಸಂಪೂರ್ಣವಾಗಿ ಲಾಭಕ್ಕಾಗಿ ರಷ್ಯಾದ ತೈಲವನ್ನು ಖರೀದಿಸುತ್ತದೆ. ಈ ಆದಾಯವು ರಷ್ಯಾದ ಯುದ್ಧ ಯಂತ್ರಕ್ಕೆ ಇಂಧನ ನೀಡುತ್ತದೆ. ಇದರಿಂದ ಉಕ್ರೇನಿಯನ್ನರು/ರಷ್ಯನ್ನರು ಸಾಯುತ್ತಾರೆ. ಅಮೆರಿಕದ ತೆರಿಗೆದಾರರು ಹೆಚ್ಚು ಹಣ ತೆರಬೇಕಾಗುತ್ತದೆ. ಭಾರತವು ಸತ್ಯವನ್ನು ಎದುರಿಸಲು ಸಾಧ್ಯವಾಗದೆ ಕಥೆ ಕಟ್ಟುತ್ತಿದೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದರು.
‘ಎಕ್ಸ್’ ನೀಡಿದ ಫ್ಯಾಕ್ಟ್-ಚೆಕ್
ನವಾರೋ ಅವರ ಆರೋಪವನ್ನು ‘ಎಕ್ಸ್’ ಸತ್ಯವೋ, ಸುಳ್ಳೋ ಎಂದು ಪರಿಶೀಲನೆ ನಡೆಸಿದೆ. ಭಾರತವು ತನ್ನ “ಇಂಧನ ಭದ್ರತೆ”ಗಾಗಿ ರಷ್ಯಾದಿಂದ ತೈಲ ಖರೀದಿಸುತ್ತಿದ್ದು, ಇದು ಯಾವುದೇ ನಿರ್ಬಂಧಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. “ಅಮೆರಿಕ ಕೂಡ ರಷ್ಯಾದಿಂದ ಯುರೇನಿಯಂನಂತಹ ಕೆಲವು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ, ಇದು ಕಪಟತನವಾಗಿದೆ” ಎಂದು ಫ್ಯಾಕ್ಟ್-ಚೆಕ್‌ನಲ್ಲಿ ಉಲ್ಲೇಖಿಸಲಾಗಿದೆ.
ನವಾರೋ ಪ್ರತಿಕ್ರಿಯೆ ಮತ್ತು ಸರಣಿ ದಾಳಿ
ಈ ಫ್ಯಾಕ್ಟ್-ಚೆಕ್‌ನಿಂದ ಕೆರಳಿದ ನವಾರೋ, “ಎಲಾನ್ ಮಸ್ಕ್ ಜನರ ಪೋಸ್ಟ್‌ಗಳಲ್ಲಿ ಪ್ರಚಾರಕ್ಕೆ ಅವಕಾಶ ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. “ಆ ಕಳಪೆ ಟಿಪ್ಪಣಿ ಕೇವಲ ಕಸ. ಭಾರತವು ಕೇವಲ ಲಾಭಕ್ಕಾಗಿ ರಷ್ಯಾದ ತೈಲವನ್ನು ಖರೀದಿಸುತ್ತದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುವ ಮೊದಲು ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರಲಿಲ್ಲ” ಎಂದು ಅವರು ತಮ್ಮ ವಾದವನ್ನು ಪುನರುಚ್ಚರಿಸಿದ್ದಾರೆ.
ಇತ್ತೀಚೆಗೆ ನವಾರೋ ಅವರು ಭಾರತದ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಟ್ರಂಪ್ ಭಾರತದ ಮೇಲೆ ಶೇ. 50 ರಷ್ಟು ಸುಂಕಗಳನ್ನು ವಿಧಿಸಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷವನ್ನು “ಮೋದಿಯ ಯುದ್ಧ” ಎಂದು ಕರೆದಿದ್ದ ನವಾರೋ, ಭಾರತವನ್ನು “ಸುಂಕಗಳ ಮಹಾರಾಜ” ಮತ್ತು “ಕ್ರೆಮ್ಲಿನ್‌ಗೆ ಲಾಂಡ್ರೋಮ್ಯಾಟ್” ಎಂದು ಜರೆದಿದ್ದರು.