ನವದೆಹಲಿ: ಚೀನಾವು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ನಿಜವಾದ ಭಾರತೀಯ” ಇಂತಹ ಹೇಳಿಕೆ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಈ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕ್ರಿಯೆಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
2022ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಚೀನಾವು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು “ಅರುಣಾಚಲ ಪ್ರದೇಶದಲ್ಲಿ ಚೀನೀ ಸೈನಿಕರು ಭಾರತೀಯ ಸೈನಿಕರನ್ನು ಥಳಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿತ್ತು. ಈ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, “ಚೀನೀಯರು 2,000 ಕಿ.ಮೀ. ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ನಿಮಗೆ ಹೇಗೆ ತಿಳಿಯಿತು?” ಎಂದು ಪ್ರಶ್ನಿಸಿತು. “ನೀವು ನಿಜವಾದ ಭಾರತೀಯರಾಗಿದ್ದರೆ, ಹೀಗೆ ಹೇಳುತ್ತಿರಲಿಲ್ಲ” ಎಂದು ನ್ಯಾಯಾಲಯ ಒತ್ತಿಹೇಳಿತು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, “ನೀವು ವಿರೋಧ ಪಕ್ಷದ ನಾಯಕರಾಗಿದ್ದುಕೊಂಡು, ಇಂತಹ ಮಾತುಗಳನ್ನೇಕೆ ಆಡುತ್ತೀರಿ? ಈ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಏಕೆ ಕೇಳುವುದಿಲ್ಲ?” ಎಂದು ಪ್ರಶ್ನಿಸಿದೆ.
ಏನಿದು ಪ್ರಕರಣ?
ರಾಜಸ್ಥಾನದಲ್ಲಿ 2022ರ ಪತ್ರಿಕಾಗೋಷ್ಠಿಯೊಂದರಲ್ಲಿ ರಾಹುಲ್ ಗಾಂಧಿ, “ಚೀನಾ 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ, 20 ಭಾರತೀಯ ಸೈನಿಕರನ್ನು ಕೊಂದಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ನಮ್ಮ ಸೈನಿಕರನ್ನು ಥಳಿಸುತ್ತಿದೆ. ಆದರೆ ಭಾರತೀಯ ಮಾಧ್ಯಮಗಳು ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದಿಲ್ಲ” ಎಂದು ಹೇಳಿದ್ದರು. ಜನವರಿ 2023ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಹೇಳಿಕೆಯನ್ನು ಪುನರುಚ್ಚರಿಸಿದ್ದ ಅವರು, ಮಾಜಿ ಸೇನಾ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದರು.
ರಾಜಸ್ಥಾನದಲ್ಲಿ ನೀಡಿದ ಈ ಹೇಳಿಕೆಗಳಿಗಾಗಿ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು ಮತ್ತು ವಿಚಾರಣಾ ನ್ಯಾಯಾಲಯ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಮೇ 29ರಂದು ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ವಾಕ್ ಸ್ವಾತಂತ್ರ್ಯವಿದೆ ಎಂದು ಸೇನೆಯನ್ನು ಅವಮಾನಿಸುವುದು ಸಲ್ಲ ಎಂದು ಹೈಕೋರ್ಟ್ ಹೇಳಿತ್ತು. ಇದರ ನಂತರ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಮತ್ತು ದುರುದ್ದೇಶದಿಂದ ದಾಖಲಿಸಲಾಗಿದೆ ಎಂದು ರಾಹುಲ್ ಗಾಂಧಿ ವಾದಿಸಿದ್ದರು.
ಕೇಂದ್ರ ಸಚಿವರ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅರುಣಾಚಲ ಪ್ರದೇಶದವರೇ ಆದ ಕೇಂದ್ರ ಸಚಿವ ಕಿರಣ್ ರಿಜಿಜು, ಸಂಸತ್ತಿನಲ್ಲಿ ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಎಕ್ಸ್(ಟ್ವೀಟರ್)ನಲ್ಲಿ ಮರುಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು “ಸುಳ್ಳು ನಿರೂಪಣೆ” ಎಂದು ಕರೆದಿದ್ದರು ಮತ್ತು “ಚೀನಾ ಅರುಣಾಚಲ ಪ್ರದೇಶದಲ್ಲಿ ಒಂದು ಇಂಚು ಭೂಮಿಯನ್ನೂ ಆಕ್ರಮಿಸಿಲ್ಲ” ಎಂದು ಪ್ರತಿಪಾದಿಸಿದ್ದರು.



















