ಬೈರೂತ್: ಲೆಬನಾನ್‌ನ ಹೆಜ್ಬುಲ್ಲಾ ಉಗ್ರರು ಮತ್ತು ಇಸ್ರೇಲ್ ನಡುವೆ ಹೊಸದಾಗಿ ಸಂಘರ್ಷ ಆರಂಭವಾಗುವ ಲಕ್ಷಣ ಗೋಚರಿಸಿದೆ. ಲೆಬನಾನ್ ಗಡಿಯಿಂದ ತನ್ನ ಮೇಲೆ ನಡೆದ ರಾಕೆಟ್ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಶನಿವಾರ ಲೆಬನಾನ್‌ನ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ(Israel Attack)ಗಳನ್ನು ನಡೆಸಿದೆ. ಈ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಮತ್ತು ಶಾಂತಿ ಒಪ್ಪಂದ ನಡೆದ ನಾಲ್ಕು ತಿಂಗಳ ಬಳಿಕ ನಡೆದ ಭೀಕರ ದಾಳಿ ಇದಾಗಿದೆ.
ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ಸೇನೆಯು ಗಾಜಾ ಪಟ್ಟಿ ಮೇಲೆ ದಾಳಿ ನಡೆಸಿ, ಹಲವರ ಸಾವಿಗೆ ಕಾರಣವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಲೆಂದೇ ಹೆಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದೆ ಎನ್ನುವುದು ಇಸ್ರೇಲ್ ವಾದವಾಗಿದೆ. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಈಗ ಲೆಬನಾನ್ ಮೇಲೆ ದಾಳಿ ನಡೆಸಿದೆ. ಪ್ರತಿದಾಳಿ ನಡೆಸುವಂತೆ ಸೇನಾಪಡೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯಿಂದಲೇ ಆದೇಶ ಬಂದಿತ್ತು ಎನ್ನಲಾಗಿದೆ.
ಲೆಬನಾನ್ ಕಡೆಯಿಂದ ಬಂದ ಆರು ರಾಕೆಟ್ ಗಲು ಇಸ್ರೇಲ್ ಗಡಿ ಸಮೀಪದ ಮೆತುಲಾ ಪಟ್ಟಣದ ಕಡೆ ಅಪ್ಪಳಿಸಿದ್ದು, ಆ ಪೈಕಿ ಮೂರು ರಾಕೆಟ್ ಗಳು ಇಸ್ರೇಲ್ ಗಡಿಯೊಳಗೆ ಪ್ರವೇಶಿಸಿತ್ತು ಎಂದು ಸೇನೆ ಖಚಿತಪಡಿಸಿದೆ. ಇದಕ್ಕೆ ಪ್ರತೀಕಾರವಾಗಿ ನಾವೂ ಲೆಬನಾನ್ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಹೆಜ್ಬುಲ್ಲಾ ಉಗ್ರ ಸಂಘಟನೆಯ ಕಮಾಂಡ್ ಸೆಂಟರ್‌ಗಳು ಹಾಗೂ ರಾಕೆಟ್ ಉಡಾವಣೆ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದಿದೆ. ಇದೇ ವೇಳೆ ಲೆಬನಾನ್ ಕಡೆಯಿಂದ ದಾಳಿ ನಡೆಸಿದ ಸಂಘಟನೆ ಯಾವುದು ಎಂಬುದು ಖಚಿತವಾಗಿಲ್ಲ ಎಂದೂ ಸೇನೆ ಸ್ಪಷ್ಟಪಡಿಸಿದೆ.
ದಾಳಿಯಲ್ಲಿ ಮಹಿಳೆಯರು-ಮಕ್ಕಳ ಸಾವು
ಇಸ್ರೇಲ್ ನಡೆಸಿದ ದಾಳಿಯಲ್ಲಿ ದಕ್ಷಿಣ ಲೆಬನಾನ್‌ನ ಟೌಲಿನ್ ಗ್ರಾಮದಲ್ಲಿ ಐವರು ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬ ಮಗುವೂ ಸೇರಿದೆ. ಇನ್ನೂ 10 ಮಂದಿ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ತೈರ್ ನಗರದ ಒಂದು ಗ್ಯಾರೇಜ್ ಮೇಲೆಯೂ ದಾಳಿ ನಡೆಸಲಾಗಿದ್ದು, ಒಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ನವೆಂಬರ್ 27ರ ಶಾಂತಿ ಒಪ್ಪಂದದ ಬಳಿಕ ತೈರ್ ನಗರದ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಸಿರಿಯಾ ಗಡಿಯ ಹೌಶ್ ಅಲ್ ಸೈಯದ್ ಅಲಿ ಗ್ರಾಮದಲ್ಲಿ ಇನ್ನೊಂದು ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ವರದಿ ಮಾಡಿದೆ.
ಹೆಜ್ಬುಲ್ಲಾ ಸ್ಪಷ್ಟನೆ
ಇನ್ನೊಂದೆಡೆ ಇಸ್ರೇಲ್ ಮೇಲಿನ ರಾಕೆಟ್ ದಾಳಿಗೆ ನಾವು ಕಾರಣವಲ್ಲ ಎಂದು ಹೆಜ್ಬುಲ್ಲಾ ಸಂಘಟನೆ ಸ್ಪಷ್ಟಪಡಿಸಿದೆ. ಅಲ್ಲದೇ ನಾವು ಶಾಂತಿ ಒಪ್ಪಂದದ ಪಾಲನೆಗೆ ಬದ್ಧ ಎಂದೂ ಹೇಳಿದೆ. ಇದೇ ವೇಳೆ ಲೆಬನಾನ್ ಪ್ರಧಾನಿ ನವಾಫ್ ಸಲಾಂ ಅವರು ತುರ್ತು ಕ್ರಮ ಕೈಗೊಳ್ಳುವಂತೆ ಸೇನೆಗೆ ಸೂಚನೆ ನೀಡಿದ್ದಾರೆ. “ದೇಶ ಮತ್ತೆ ಯುದ್ಧದ ಕಡೆಗೆ ಹೋಗಬಾರದು” ಎಂದೂ ಹೇಳಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ನಿರಂತರ ದಾಳಿ
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ. ಹಮಾಸ್ ಉಗ್ರ ಸಂಘಟನೆಯು ತನ್ನ ಒತ್ತೆಯಲ್ಲಿರುವ ಉಳಿದ 59 ಮಂದಿ ಇಸ್ರೇಲ್ ಪ್ರಜೆಗಳನ್ನು ಬಿಡುಗಡೆ ಮಾಡುವವರೆಗೂ ಗಾಜಾ ಮೇಲಿನ ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಶುಕ್ರವಾರ ರಾತ್ರಿ ಗಾಜಾದ ಮನೆ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸೇರಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಇಸ್ರೇಲ್ ಸೇನೆ ಇದೀಗ ಗಾಜಾ ನಗರದ ಪಶ್ಚಿಮ ಭಾಗದ ಮೂರು ಪ್ರದೇಶಗಳ ಮೇಲೆ ಹೊಸದಾಗಿ ದಾಳಿ ನಡೆಸಲು ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಗಾಜಾ ಬಿಟ್ಟು ತೆರಳುವಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.