ಬೆಂಗಳೂರು: ಈಗಷ್ಟೇ ಹೆಣ್ಣುಮಗಳು ಜನಿಸಿದ್ದಾಳೆ. ಅವಳನ್ನು ಚೆನ್ನಾಗಿ ಸಾಕಬೇಕು, ಉನ್ನತ ಶಿಕ್ಷಣ ಕೊಡಿಸಬೇಕು, ಒಳ್ಳೆಯ ಮನೆ ನೋಡಿ ಮದುವೆ ಮಾಡಬೇಕು ಎಂದು ಬಹುತೇಕ ಪೋಷಕರು ಮಗಳು ಹುಟ್ಟಿದ ದಿನದಿಂದಲೇ ಲೆಕ್ಕ ಹಾಕುತ್ತಾರೆ. ಹೀಗೆ ಜನಿಸಿದ ಮಗಳಿಗೆ 21 ವರ್ಷ ತುಂಬುವ ವೇಳೆಗೇ ನೀವು ಆಕೆಗೆ 70 ಲಕ್ಷ ರೂಪಾಯಿ ಉಡುಗೊರೆ ನೀಡಬೇಕಾ? ಹಾಗಾದರೆ, ನಿಮಗೆ ಸುಕನ್ಯಾ ಸಮೃದ್ಧಿ ಯೋಜನೆಯು ಹೇಳಿ ಮಾಡಿಸಿದಂತಿದೆ.
ಹೌದು, ಪೋಸ್ಟ್ ಆಫೀಸ್ ನಲ್ಲಿ ನೀವು ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆದು, ನಿಯಮಿತವಾಗಿ ಹೂಡಿಕೆ ಮಾಡುತ್ತ ಹೋದರೆ, 21 ವರ್ಷದಲ್ಲಿ ನೀವು ಮಗಳ ಭವಿಷ್ಯಕ್ಕೆ ದೊಡ್ಡ ಉಡುಗೊರೆ ನೀಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ.8.2ರಷ್ಟು ಬಡ್ಡಿದರ ಲಭಿಸುತ್ತದೆ. ತೆರಿಗೆ ಉಳಿತಾಯವನ್ನೂ ಮಾಡಬಹುದಾಗಿದೆ. ಹಾಗಾಗಿ, ಹೆಣ್ಣುಮಗಳು ಇರುವ ಪೋಷಕರಿಗೆ ಇದು ಉತ್ತಮ ಯೋಜನೆಯಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಗೆ ನೀವು ಮಾಸಿಕ 12,500 ರೂಪಾಯಿ ಹೂಡಿಕೆ ಮಾಡಬೇಕು. ಮಗಳ ಹೆಸರಿನಲ್ಲಿ ಖಾತೆ ತೆರೆದ ದಿನಾಂಕದಿಂದ ನೀವು 15 ವರ್ಷದವರೆಗೆ ಪ್ರತಿ ವರ್ಷ 1.5 ಲಕ್ಷ ರೂ. (ತಿಂಗಳಿಗೆ 12,500 ರೂ.) ಹೂಡಿಕೆ ಮಾಡಬೇಕು. 15 ವರ್ಷದ ಬಳಿಕ ನೀವು ಹಣ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, 21 ವರ್ಷದ ನಂತರ ನೀವು ಹಣವನ್ನು ಹಿಂಪಡೆದಾಗ ಅದು 69 ಲಕ್ಷ ರೂ. ಆಗಿರುತ್ತದೆ.
ಹೌದು, ನಿಮ್ಮ ಹೂಡಿಕೆ ಹಾಗೂ ಕಾಯುವಿಕೆ ಅವಧಿ ಮುಕ್ತಾಯದ ನಂತರ ಅಂದರೆ 21 ವರ್ಷಗಳ ನಂತರ ಒಟ್ಟು 69,27,578 ರೂ.ಗಳನ್ನು ನಿಮ್ಮ ಮಗಳ ಹೆಸರಿನಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ನೀವು ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು ಎಂಬುದನ್ನು ನೆನಪಿಡಿ. ಇದರಲ್ಲಿ, ನಿಮಗೆ 46,77,578 ರೂ.ಗಳವರೆಗೆ ಬಡ್ಡಿ ಲಭ್ಯವಿರುತ್ತದೆ. ನೀವು ಮಾಡುವ ಹೂಡಿಕೆ ರೂ. 22,50,000 ಆಗಿರುತ್ತದೆ. ಎರಡೂ ಸೇರಿ 69 ಲಕ್ಷ ರೂ. ಲಭಿಸುತ್ತದೆ.