ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲ್ಲೂಕಿನ ರಾಮನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರೋಬ್ಬರಿ 1930 ಕೆಜಿ ದನದ ಮಾಂಸವನ್ನು ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ರಾಮನಗರ ಶಿವಾಜಿ ಸರ್ಕಲ್ ನಲ್ಲಿ ಇದ್ದ ಎ.ಎಸ್.ಐ ರಾಜಪ್ಪ ದೊಡ್ಡಮನಿ, ಬೆಳಗಾವಿ ಕಡೆಯಿಂದ ಬರುತ್ತಿದ್ದ ಟಾಟಾ ಯೋಧ ವಾಹನಕ್ಕೆ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಆದರೆ, ವಾಹನ ಚಾಲಕ ನಿಲ್ಲಿಸದೇ ವೇಗವಾಗಿ ಅಲ್ಲಿಂದ ಪರಾರಿಯಗಲು ಪ್ರಯತ್ನಿಸಿದಾಗ ಸಂಶಯ ಬಂದು ವಿಶೇಷ ರೌಂಡ್ಸ್ ನಲ್ಲಿ ಕರ್ತವ್ಯದಲ್ಲಿದ್ದ ಪಿ.ಎಸ್.ಐ ಮಹಂತೇಶ್ ಗೆ ಮಾಹಿತಿ ನೀಡಿದ್ದಾರೆ.
ಪಿ.ಎಸ್.ಐ ರಾಮನಗರದ ಜಾಮಿಯಾ ಮಸೀದಿ ಬಳಿ ವಾಹನ ಅಡ್ಡಗಟ್ಟಿ ನಿಲ್ಲಿಸಿ ವಾಹನ ಪರಿಶೀಲಿಸಿದಾಗ ಸತ್ಯ ಬಯಲಿಗೆ ಬಂದಿದೆ.
ಆರೋಪಿಗಳಾದ ಸಿದ್ದಪ್ಪ ಬಾಳಪ್ಪ ಹಾಗೂ ರಾಜು ನಾಯ್ಕ್ ಎಂಬುವವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಈ ಸ್ವತ್ತು ಬೆಳಗಾವಿಯ ಅಮೋಲ ಮೋಹನ್ ದಾಸ್ ಅವರಿಗೆ ಸೇರಿದ್ದಾಗಿದೆ. ಇದನ್ನು ಬೆಳಗಾವಿಯಿಂದ ಗೋವಾಕ್ಕೆ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 1930 ಕೆಜಿ ತೂಕದ ಅಂದಾಜು 6,75,000 ರೂ. ಮೌಲ್ಯದ ದನದ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.



















