ಚೆನ್ನೈ: ತಮಿಳುನಾಡಿನ ತಿರುವಳ್ಳೂರ್‌ನಲ್ಲಿ ಭಾನುವಾರ ಬೆಳಗ್ಗೆ ಚೆನ್ನೈ ಬಂದರಿನಿಂದ ಇಂಧನ(ಡೀಸೆಲ್) ಸಾಗಿಸುತ್ತಿದ್ದ ಸರಕು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದಾಗಿ ಅರಕ್ಕೋಣಂ ಮಾರ್ಗದ ರೈಲು ಸೇವೆಗಳು ಸ್ಥಗಿತಗೊಂಡಿವೆ. ರೈಲು ಏಕಾಏಕಿ ಹಳಿ ತಪ್ಪಿದ್ದೇ ಘಟನೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದು, ರೈಲ್ವೆ ಪೊಲೀಸರು ಬೆಂಕಿಯ ನಿಖರ ಕಾರಣವನ್ನು ತಿಳಿಯಲು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಬೆಂಕಿ ಉಂಟಾದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿದ್ದು, ಸ್ಥಳೀಯರು ಆ ಪ್ರದೇಶದಿಂದ ದೂರವಿರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹಲವಾರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಬೆಂಕಿ ಹೊತ್ತಿಕೊಂಡಿದ್ದ ನಾಲ್ಕು ಬೋಗಿಗಳನ್ನು ಉಳಿದ ರೈಲಿನಿಂದ ಪ್ರತ್ಯೇಕಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ರೈಲು ಸೇವೆ ವ್ಯತ್ಯಯ
ಘಟನೆಯಿಂದಾಗಿ ಅರಕ್ಕೋಣಂ ಮಾರ್ಗದ ರೈಲು ಸೇವೆಗಳು ಸ್ಥಗಿತಗೊಂಡಿದ್ದು, ಇದು ಚೆನ್ನೈಗೆ ಹೋಗುವ ಮತ್ತು ಬರುವ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. “ತಿರುವಳ್ಳೂರ್ ಸಮೀಪ ಬೆಂಕಿ ಹೊತ್ತಿಕೊಂಡ ಘಟನೆಯಿಂದಾಗಿ ಸುರಕ್ಷತಾ ಕ್ರಮವಾಗಿ ಓವರ್‌ಹೆಡ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದು ರೈಲು ಕಾರ್ಯಾಚರಣೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ. ಪ್ರಯಾಣಿಕರು ಪ್ರಯಾಣದ ಮೊದಲು ಇತ್ತೀಚಿನ ಅಪ್‌ಡೇಟ್‌ಗಳನ್ನು ಪರಿಶೀಲಿಸಬೇಕು” ಎಂದು ದಕ್ಷಿಣ ರೈಲ್ವೇ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
ಸ್ಥಳೀಯರ ಸ್ಥಳಾಂತರ
ಬೆಂಕಿ ಹೊತ್ತಿಕೊಂಡ ಪ್ರದೇಶದ ಸುತ್ತಮುತ್ತಲು ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಘಟನಾ ಸ್ಥಳಕ್ಕೆ ಹತ್ತಿರದ ಮನೆಗಳಲ್ಲಿ ಬಳಸುತ್ತಿದ್ದ ಎಲ್‌ಪಿಜಿ ಸಿಲಿಂಡರ್‌ಗಳನ್ನೂ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.