ಮುಂಬೈ : ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಭ್ರಮದ ನಡುವೆಯೇ ಕ್ರೀಡಾ ಜಗತ್ತಿನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಬಿಸಿಸಿಐ ಪರ ಅಧಿಕೃತ ಪ್ರಸಾರ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟಿಷ್ ಮೂಲದ ಇಂಜಿನಿಯರ್ ಒಬ್ಬರು ಮುಂಬೈನ ಐಷಾರಾಮಿ ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಮೃತರನ್ನು 76 ವರ್ಷದ ಇಯಾನ್ ವಿಲಿಯಂ ಲೆಗ್ನ್‌ಫೋರ್ಡ್ ಎಂದು ಗುರುತಿಸಲಾಗಿದೆ. ಇವರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ನೇರ ಪ್ರಸಾರಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ತಂಡದ ಪ್ರಮುಖ ಸದಸ್ಯರಾಗಿದ್ದರು.
ಘಟನೆಯ ವಿವರ :
ವರದಿಗಳ ಪ್ರಕಾರ, ಮಾರ್ಚ್ 29 ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನಂತರ ಇಯಾನ್ ಅವರು ತಾವು ತಂಗಿದ್ದ ಟ್ರೈಡೆಂಟ್ ಹೋಟೆಲ್‌ಗೆ ಮರಳಿದ್ದರು. ಮರುದಿನ ಬೆಳಿಗ್ಗೆ ಅವರು ಹೋಟೆಲ್ ಸಿಬ್ಬಂದಿಯ ದೂರವಾಣಿ ಕರೆಗಳಿಗೆ ಸ್ಪಂದಿಸದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೊಠಡಿಯನ್ನು ಪ್ರವೇಶಿಸಿದ್ದಾರೆ. ಈ ವೇಳೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ತಕ್ಷಣವೇ ಆಗಮಿಸಿದ ಹೋಟೆಲ್ ವೈದ್ಯರು ಪರೀಕ್ಷಿಸಿ, ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮುಂಬೈನ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (Accidental Death Case) ಎಂದು ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸಂಶಯಾಸ್ಪದ ಅಂಶಗಳು ಕಂಡುಬಂದಿಲ್ಲವಾದರೂ, ಸಾವಿನ ನಿಖರ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 2020ರ ಐಪಿಎಲ್ ವೇಳೆ ಪ್ರಖ್ಯಾತ ಕಾಮೆಂಟೇಟರ್ ಡೀನ್ ಜೋನ್ಸ್ ಅವರೂ ಸಹ ಇದೇ ರೀತಿ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು. ಈಗ ಇಯಾನ್ ಅವರ ಸಾವು ಕ್ರಿಕೆಟ್ ಪ್ರಸಾರ ತಂಡದಲ್ಲಿ ಶೋಕದ ಛಾಯೆ ಮೂಡಿಸಿದೆ. ಐಪಿಎಲ್ 2026ರ ಸಂಭ್ರಮದ ನಡುವೆ ಈ ದುರಂತ ಸಂಭವಿಸಿರುವುದು ಕ್ರೀಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಇದನ್ನೂ ಓದಿ : ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಎಲ್ಲಿ? ರಷ್ಯಾ ರಾಯಭಾರಿಯಿಂದ ಹೊರಬಂತು ಸ್ಪಷ್ಟನೆ



















