ವಿಜಯನಗರ: ಟ್ರ್ಯಾಕ್ಟರ್ (Tractor) ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ವಿಜಯನಗರ (Vijayanagara) ಜಿಲ್ಲೆಯ ಕೂಡ್ಲಿಗಿ (Kudligi) ತಾಲೂಕಿನ ನಾಗಲಾಪುರ ಗ್ರಾಮದ ಹತ್ತಿರ ನಡೆದಿದೆ. ಅಲ್ಲದೇ, ಘಟನೆಯಲ್ಲಿ 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡ್ ಮೂಲದ ಕಾರ್ಮಿಕ ಜ್ಯೋತಿಲಾಲ್ ತುಡು (35) ಸಾವನ್ನಪ್ಪಿದ್ದಾರೆ.
ಬಿಹಾರ ಹಾಗೂ ಜಾರ್ಖಂಡ್ ಮೂಲದ ಕಾರ್ಮಿಕರು ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿದ್ದವರೆಲ್ಲ ವಿಂಡ್ ಫ್ಯಾನ್ ಕೆಲಸಕ್ಕೆಂದು ಬಂದಿದ್ದರು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಕೈ, ಕಾಲು ಮುರಿದಿದ್ದು, ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡ್ಲಿಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.