ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಹಲವು ನಿವಾಸಿಗಳಲ್ಲಿ ಇತ್ತೀಚೆಗೆ ಹಠಾತ್ ಕೂದಲು ಉದುರುವಿಕೆ ಸಮಸ್ಯೆ ಕಂಡುಬಂದಿತ್ತು. ಏಕಾಏಕಿ ಒಂದೇ ಊರಿನ ಅಷ್ಟೊಂದು ಜನರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವುದರ ಹಿಂದಿನ ಕಾರಣವೇನು ಎಂಬುದು ರಹಸ್ಯವಾಗಿಯೇ ಉಳಿದಿತ್ತು. ಇದು ಹಲವು ತಜ್ಞರು ಹಾಗೂ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಈಗ ಪದ್ಮಶ್ರೀ ಪುರಸ್ಕೃತ ಡಾ. ಹಿಮ್ಮತ್‌ರಾವ್ ಬವಾಸ್ಕರ್ ಅವರ ನೇತೃತ್ವದಲ್ಲಿ ನಡೆದ ಅಧ್ಯಯನವು ಈ ಸಮಸ್ಯೆಯ ಹಿಂದಿನ ಕಾರಣವನ್ನು ಪತ್ತೆಹಚ್ಚಿದೆ.
ಬುಲ್ಧಾನಾ ಜಿಲ್ಲೆಯ ಜನರು ಸೇವಿಸುತ್ತಿರುವ ಗೋಧಿಯಲ್ಲಿನ ವಿಷಕಾರಿ ಅಂಶಗಳೇ ಕೂದಲುದುರುವಿಕೆ ಸಮಸ್ಯೆಗೆ ಕಾರಣ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಒಂದು ತಿಂಗಳ ಕಾಲ ಡಾ.ಬವಾಸ್ಕರ್ ಅವರ ತಂಡವು ಅಧ್ಯಯನ ನಡೆಸಿದ ಬಳಿಕ ಈ ವಿಚಾರವನ್ನು ಕಂಡುಕೊಂಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ವಿತರಿಸಲಾದ ಗೋಧಿಯಲ್ಲಿ ಹೆಚ್ಚಿನ ಮಟ್ಟದ ಸೆಲೇನಿಯಂ ಇದ್ದು, ಸತುವಿನ ಅಂಶವು ಗಮನಾರ್ಹವಾಗಿ ಕಡಿಮೆಯಾಗಿದೆ. ಸ್ಥಳೀಯವಾಗಿ ಬೆಳೆಸಲಾದ ಗೋಧಿಗೆ ಹೋಲಿಸಿದರೆ ಪಡಿತರದಲ್ಲಿ ವಿತರಿಸಲಾದ ಗೋಧಿಯಲ್ಲಿ 600 ಪಟ್ಟು ಅಧಿಕ ಸೆಲೇನಿಯಂ ಇರುವುದು ತಿಳಿದುಬಂದಿದೆ. ಜನರು ಅತ್ಯಧಿಕ ಪ್ರಮಾಣದಲ್ಲಿ ಸೆಲೇನಿಯಂ ಸೇವನೆ ಮಾಡಿದ್ದರಿಂದ ಅವರಲ್ಲಿ ಅಲೋಪೇಷಿಯಾ ಅಂದರೆ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಹೆಚ್ಚಿನ ಜನರು ಇಂಥ ಗೋಧಿ ಸೇವನೆ ಮಾಡಿದ್ದರಿಂದ ಅತ್ಯಂತ ಕ್ಷಿಪ್ರವಾಗಿ ಈ ಸಮಸ್ಯೆ ವ್ಯಾಪಿಸಿದೆ. ರೋಗ ಲಕ್ಷಣಗಳು ಕಂಡುಬಂದ ಕೇವಲ 3-4 ದಿನಗಳಲ್ಲೇ ಹಲವರ ತಲೆ ಸಂಪೂರ್ಣ ಬೋಳಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಗೋಧಿಯ ಮಾದರಿಗಳನ್ನು ಥಾಣೆಯ ವೆರ್ನಿ ಅನಾಲಿಟಿಕಲ್ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಈ ವೇಳೆ ಗೋಧಿಯಲ್ಲಿ ಸೆಲೇನಿಯಂ ಮಟ್ಟ 14.52 ಮಿಗ್ರಾಂ/ಕೆಜಿ ಇರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಗೋಧಿಯಲ್ಲಿ ಸೆಲೇನಿಯಂ ಪ್ರಮಾಣ 1.9 ಮಿಗ್ರಾಂ/ಕೆಜಿಗಿಂತ ಇರುತ್ತದೆ ಎಂದು ಡಾ. ಬವಾಸ್ಕರ್ ಹೇಳಿದ್ದಾರೆ. ಬುಲ್ಧಾನಾಗೆ ಈ ಗೋಧಿ ಬಂದಿರುವುದು ಪಂಜಾಬ್‌ನಿಂದ ಎಂಬ ವಿಚಾರವೂ ತಿಳಿದುಬಂದಿದೆ.
“ರಕ್ತ, ಮೂತ್ರ ಮತ್ತು ಕೂದಲಿನ ಮಾದರಿಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಸೆಲೇನಿಯಂ ಪ್ರಮಾಣ ಕ್ರಮವಾಗಿ 35 ಪಟ್ಟು, 60 ಪಟ್ಟು ಮತ್ತು 150 ಪಟ್ಟು ಹೆಚ್ಚಳ ಕಂಡುಬಂದಿದೆ. ಅತಿಯಾದ ಸೆಲೇನಿಯಂ ಸೇವನೆಯೇ ಏಕಾಏಕಿ ತಲೆಕೂದಲು ಉದುರುವಿಕೆ ಸಮಸ್ಯೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಸಮಸ್ಯೆ ಕಂಡುಬಂದು ವ್ಯಕ್ತಿಗಳಲ್ಲಿ ಸತುವಿನ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನೂ ತಂಡ ಕಂಡುಕೊಂಡಿದೆ” ಎಂದೂ ಅವರು ಹೇಳಿದರು.
ಡಿಸೆಂಬರ್ 2024 ಮತ್ತು ಈ ವರ್ಷದ ಜನವರಿಯ ನಡುವೆ 18 ಹಳ್ಳಿಗಳ ಸುಮಾರು 300 ಜನರು ತೀವ್ರ ಕೂದಲು ಉದುರುವಿಕೆ ಸಮಸ್ಯೆ ಎದುರಿಸಿದ್ದಾರೆ. ಈ ಪೈಕಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರೂ ಇದ್ದು, ಈ ಸಮಸ್ಯೆಯು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಅನೇಕ ಮಕ್ಕಳು ಶಾಲೆ, ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ನಿಗದಿಯಾಗಿದ್ದ ಮದುವೆಗಳೂ ರದ್ದಾಗಿವೆ. ಇಂಥದ್ದೊಂದು ಸಾಮಾಜಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲೇಬೇಕೆಂದು ನಾನು ಆ ಪ್ರದೇಶಕ್ಕೆ ಹೋಗಿ ಅಧ್ಯಯನ ಆರಂಭಿಸಿದೆ” ಎಂದಿದ್ದಾರೆ ಡಾ.ಬಾವಸ್ಕರ್. ಇನ್ನು ನಾನು ನನ್ನ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವಿಜ್ಞಾನಿಗಳು ಕೂಡ ಪರೀಕ್ಷೆಗಾಗಿ ಈ ಪ್ರದೇಶದಿಂದ ನೀರು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಕೂದಲು ಉದುರುವಿಕೆಯನ್ನು ಅನುಭವಿಸಿದವರ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೆಲೇನಿಯಂ ಇರುವುದು ಐಸಿಎಂಆರ್ ಪರೀಕ್ಷೆಯಲ್ಲೂ ದೃಢಪಟ್ಟಿದೆ ಎನ್ನಲಾಗಿದೆ. ಐಸಿಎಂಆರ್ ತನ್ನ ತನಿಖಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಅದರ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.