ಕೊಡಚಾದ್ರಿ : ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಹಿಡ್ಲುಮನೆ ಜಲಪಾತವಿದೆ, ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುವ ಒಂದು ಸುಂದರವಾದ ಜಲಪಾತ.
ಹಿಡ್ಲುಮನೆ ಜಲಪಾತಕ್ಕೆ ಹೋಗಲು, ಕೊಡಚಾದ್ರಿ ಬೆಟ್ಟಗಳ ದಟ್ಟವಾದ ಕಾನನದ ಮೂಲಕ ಒಂದು ರೋಮಾಂಚಕಾರಿ ಪ್ರಯಾಣವನ್ನು ಕೈಗೊಳ್ಳಬೇಕು. ಹಚ್ಚ ಹಸಿರಿನ ದಾರಿಯಲ್ಲಿ ಉದ್ದಕ್ಕೂ ಜೀವವೈವಿಧ್ಯದ ಸಂಪತ್ತನ್ನು ಮೈದುಂಬಿಕೊಂಡಿರುವ ಕಾಂತಾರದ ನಟ್ಟನಡುವೆ ಹೆಜ್ಜೆ ಇಟ್ಟು ತೆರಳಬೇಕು.
ಚಾರಣಕ್ಕೂ ಹಲವು ಮಾರ್ಗಗಳಿವೆ, ಪ್ರತಿಯೊಂದೂ ವಿಭಿನ್ನ ಅನುಭವವನ್ನು ಕೊಡುವ ಮನಮೋಹಕ ಪ್ರವಾಸಿ ತಾಣವಿದು. ಸಂಪೆಕಟ್ಟೆ ಮತ್ತು ನಿಟ್ಟೂರು ಗ್ರಾಮಗಳು ಆರಂಭಿಕ ಸ್ಥಳಗಳಾಗಿವೆ. ನೀವು ಸಂಪೆಕಟ್ಟೆಯಿಂದ ನಿಮ್ಮ ಪ್ರಯಾಣ ಪ್ರಾರಂಭಿಸಿದರೆ, ಭತ್ತದ ಗದ್ದೆಗಳು ಮತ್ತು ದಟ್ಟ ಕಾನನವನ್ನು ದಾಟಿ, ನದಿಗಳನ್ನು ದಾಟಿ, ಕಡಿದಾದ ಬೆಟ್ಟಗಳನ್ನು ಹತ್ತಿ ಜಲಪಾತವಿರುವ ಭವ್ಯ ತಾಣವನ್ನು ತಲುಪುತ್ತೀರಿ. ಆದಾಗ್ಯೂ, ನಿಟ್ಟೂರು ಗ್ರಾಮದ ಮಾರ್ಗವು ಸುಲಭವಾಗಿದೆ. ಜೀಪ್ ವ್ಯವಸ್ಥೆಯೂ ಇಲ್ಲಿದ್ದು, ಚಾರಣವನ್ನು ಬಯಸದೆ ಇರುವವರು ಈ ಮೂಲಕವೂ ಜಲಪಾತವನ್ನು ತಲುಪಬಹುದಾಗಿದೆ.
ಹಿಡ್ಲುಮನೆ ಜಲಪಾತವನ್ನು ಮತ್ತಷ್ಟು ಮುದಗೊಳಿಸುವುದೆಂದರೇ ಅದು ಚಾರಣ. ಚಾರಣ ಪ್ರಿಯರಿಗೆ ಇದೊಂದು ಹೊಸ ತಾಣವಾಗಿದ್ದು, ಮನ ಮುದಗೊಳ್ಳುವುದು ನಿಶ್ಚಿತವೆಂದರೇ ತಪ್ಪಿಲ್ಲ. ಚಾರಣಿಗರು ಹೊಳೆಗಳನ್ನು ದಾಟಿ ದಟ್ಟ ಕಾನನಗಳ ಮೂಲಕ ಅಥವಾ ಕಲ್ಲು ಮುಳ್ಳುಗಳ ಹಾದಿ ದಾಟಿ ಈ ಜಲಪಾತವನ್ನು ತಲುಪಿದರೇ ಪರಮಾನಂದವನ್ನನುಭವಿಸುವುದರಲ್ಲಿ ಸಂಶಯವಿಲ್ಲ.
ಕೊಲ್ಲೂರು ನಿಟ್ಟೂರು ಸಮೀಪದಲ್ಲಿ ಹಿಡ್ಲುಮನೆ ಜಲಪಾತ ಮಳೆಗಾಲದಲ್ಲಿ ತುಂಬಿ ಭೋರ್ಗರೆಯುತ್ತದೆ. ಮಳೆಗಾಲದಲ್ಲಿ ತುಂಬು ಗರ್ಭಿಸಿಕೊಳ್ಳುವ ಈ ಜಲಪಾತವನ್ನು ಪಶ್ಚಿಮ ಘಟ್ಟಗಳ ಆವರಿಸಿರುವ ಹಸಿರು ಸೆರಗಿನಿಂದ ಧುಮುಕುವುದನ್ನು ನೋಡುವುದೇ ಭವ್ಯ ಅನುಭವ. ಕಾನನದ ರಣಮೌನವನ್ನು ಮುರಿಯುವ ಈ ಜಲಪಾತದ ಸದ್ದು ಕೂಡ ಚಾರಣಿಗರಿಗೆ ಮುದ ನೀಡುತ್ತದೆ.
ಮಳೆಗಾಲದಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವ ಇಚ್ಛಿಸುವವರು ಜಲಪಾತದ ಬಗ್ಗೆ ಅರಿವಿರುವ ಸ್ಥಳೀಯರ ಮಾರ್ಗದರ್ಶನದ ಮೂಲಕ ಭೇಟಿ ನೀಡಬಹುದಾಗಿದೆ.