ರಾಜ್ಯಾದಾದ್ಯಂತ ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಇದೀಗ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಯಾಗಿರುವ ಹಿನ್ನೆಲೆಯಲ್ಲಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿದಿರುವ ಪರಿಣಾಮ ರಸ್ತೆಗೆ ಬಂಡೆ, ಮಣ್ಣು ಬಿದ್ದಿದೆ. ಕವಿಕಲ್ ಗಂಡಿ ಬಳಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪ್ರವಾಸಿ ಮಿತ್ರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ರಸ್ತೆಯಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತವೆ. ಮಳೆ ಹೆಚ್ಚಾದರೆ ಒಂದು ಭಾಗದ ಗುಡ್ಡವೇ ಕುಸಿದು ಬೀಳುವ ಸಂಭವವಿದೆ. ಆ ಹಿನ್ನೆಲೆಯಲ್ಲಿ ಇಂದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಲೆನಾಡಿನ 6 ತಾಲೂಕುಗಳಾದ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ ಕೊಪ್ಪ, NR ಪುರ ತಾಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.