ಮಹಿಳಾ ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಇಂದು ಭಾರತ ತಂಡವು ಪಾಕಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿದೆ. ಭಾರತ ತಂಡವು ಮೊದಲ ಮ್ಯಾಚ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದು, ಫೈನಲ್ ಪ್ರವೇಶಿಸಬೇಕಾದರೆ, ಈ ಪಂದ್ಯ ಗೆಲ್ಲಲೇಬೇಕು.
ನ್ಯೂಜಿಲೆಂಡ್ ವಿರುದ್ಧದ ಸೋಲಿನೊಂದಿಗೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ -2.900 ನೆಟ್ ರನ್ ರೇಟ್ನೊಂದಿಗೆ ಭಾರತ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಬೇಕಾಗಿದೆ. ಹೀಗಾದರೆ ಮಾತ್ರ ಭಾರತ ತಂಡ ಫೈನಲ್ ರೇಸ್ ನಲ್ಲಿ ಉಳಿದುಕೊಳ್ಳಲಿದೆ.
ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಕಂಡಿರುವ ಪಾಕಿಸ್ತಾನ್ 2 ಅಂಕಗಳೊಂದಿಗೆ +1.550 ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ್ ಬಗ್ಗು ಬಡಿದು ಅಂಕಪಟ್ಟಿಯಲ್ಲಿ ಮೇಲೆ ಬರಬೇಕಿದೆ. ಒಂದು ವೇಳೆ ಭಾರತ ತಂಡವು ಪಾಕಿಸ್ತಾನ್ ವಿರುದ್ಧ ಕೂಡ ಸೋಲು ಕಂಡರೆ, ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಎರಡು ತಂಡಗಳು 6 ಅಂಕಗಳನ್ನು ಕಲೆಹಾಕಿದರೆ ಭಾರತ ತಂಡ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿಯೇ ಇಂದಿನ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕ.
ಭಾರತ ತಂಡ ಪಾಕ್ ವಿರುದ್ಧ ಗೆದ್ದು ನಂತರದ ಎರಡೂ ಪಂದ್ಯ ಗೆದ್ದರೆ ಒಟ್ಟು 6 ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಬಹುದು. ಹೀಗಾಗಿ ಈ ಪಂದ್ಯ ಸೇರಿದಂತೆ ಮುಂದಿನ ಪಂದ್ಯಗಳು ಭಾರತದ ಪಾಲಿಗೆ ನಿರ್ಣಾಯಕವಾಗಿವೆ. ಇಲ್ಲಿಯವರೆಗೆ ಭಾರತ ಹಾಗೂ ಪಾಕ್ ತಂಡಗಳು 15 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಹೀಗಾಗಿ ಭಾರತ ತಂಡವೇ ಗೆಲ್ಲುವ ಫೆವರೀಟ್ ತಂಡವಾಗಿದೆ.