ನವದೆಹಲಿ: ಐಪಿಎಲ್ ಹಂಗಾಮ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ಭಾರತದ ಆರೋಗ್ಯ ಸಚಿವಾಲಯ ಬಿಸಿಸಿಐಗೆ ವಾರ್ನಿಂಗ್ ನೀಡಿದೆ.
ಭಾರತದ ಆರೋಗ್ಯ ಸಚಿವಾಲಯವು, ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮತ್ತು ಬಿಸಿಸಿಐ (BCCI) ಅಧ್ಯಕ್ಷರಿಗೆ ಪತ್ರ ಬರೆದಿದೆ. ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ ಪಂದ್ಯಗಳ ನೇರ ಪ್ರಸಾರದಲ್ಲಿ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಖಡಕ್ ಸೂಚನೆ ನೀಡಿದೆ.
ಆರೋಗ್ಯ ಮತ್ತು ಫಿಟ್ ನೆಸ್ ಗೆ ಸಂಬಂಧಿಸಿದ ಈ ಕಾರ್ಯಕ್ರಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತಂಬಾಕು ಮತ್ತು ಮದ್ಯವನ್ನು ಉತ್ತೇಜಿಸಿದರೆ ತನ್ನದೇ ನಿಯಮಗಳಿಗೆ ವಿರುದ್ಧವಾಗಿರುತ್ತದೆ ಎಂದು ಸಚಿವಾಲಯ ಸೂಚಿಸಿದೆ.
ಭಾರತವು ಹೃದಯ ಕಾಯಿಲೆ, ಕ್ಯಾನ್ಸರ್, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಮತ್ತು ಯಕೃತ್ತಿನ ಸೋಂಕುಗಳು, ಕ್ಯಾನ್ಸರ್ ಮತ್ತು ಶ್ವಾಸಕೋಶದ ಕಾಯಿಲೆಗಳಂತಹ ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚುತ್ತಿರುವ ಹೊರೆ ಎದುರಿಸುತ್ತಿದೆ. ಇವುಗಳಿಂದಾಗಿ ಶೇ. 70ರಷ್ಟು ಸಾವು ಸಂಭವಿಸುತ್ತಿವೆ. ತಂಬಾಕು ಮತ್ತು ಮದ್ಯ ಸೇವನೆಯು ಅಪಾಯಕಾರಿ ಅಂಶಗಳಾಗಿವೆ. ತಂಬಾಕು ಸಂಬಂಧಿತ ಸಾವುಗಳಲ್ಲಿ ವಿಶ್ವಾದ್ಯಂತ ಭಾರತ ಎರಡನೇ ಸ್ಥಾನ ಹೊಂದಿದೆ. ತಂಬಾಕಿನಿಂದಾಗಿ 14 ಲಕ್ಷ ವಾರ್ಷಿಕ ಸಾವುಗಳು ಸಂಭವಿಸುತ್ತಿವೆ. ಹೀಗಾಗಿ ಅವುಗಳನ್ನು ಉತ್ತೇಜಿಸುವ ಜಾಹೀರಾತು ಕೈ ಬಿಡಬೇಕೆಂದು ಸೂಚನೆ ನೀಡಲಾಗಿದೆ.