ಕೋಲ್ಕತ್ತಾ : ಮುಂಬರುವ ರಾಜ್ಯಸಭಾ ಚುನಾವಣೆಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ತನ್ನ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ಈ ಬಾರಿ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಕಣಕ್ಕಿಳಿಸುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಅವರು ಅಚ್ಚರಿ ಮೂಡಿಸಿದ್ದಾರೆ. ಖ್ಯಾತ ಬಂಗಾಳಿ ನಟಿ ಕೋಯಲ್ ಮಲ್ಲಿಕ್, ರಾಜ್ಯದ ಮಾಜಿ ಪೊಲೀಸ್ ಮಹಾನಿರ್ದೇಶಕ (DGP) ರಾಜೀವ್ ಕುಮಾರ್, ಸಚಿವ ಬಾಬುಲ್ ಸುಪ್ರಿಯೋ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರಿಗೆ ರಾಜ್ಯಸಭೆಯ ಟಿಕೆಟ್ ನೀಡಲಾಗಿದೆ.
ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಅವಕಾಶ
ಟಿಎಂಸಿ ಈ ಬಾರಿ ಸಿನಿಮಾ, ಕಾನೂನು ಮತ್ತು ಆಡಳಿತ ಕ್ಷೇತ್ರಗಳ ಗಣ್ಯರನ್ನು ಆಯ್ಕೆ ಮಾಡುವ ಮೂಲಕ ತನ್ನ ಸಾಮಾಜಿಕ ಅಡಿಪಾಯವನ್ನು ವಿಸ್ತರಿಸುವ ಪ್ರಯತ್ನ ನಡೆಸಿದೆ. ಬಂಗಾಳಿ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಹಿರಿಯ ನಟ ರಂಜಿತ್ ಮಲ್ಲಿಕ್ ಅವರ ಪುತ್ರಿಯಾದ ಕೋಯಲ್ ಮಲ್ಲಿಕ್ ಅವರ ಸೇರ್ಪಡೆಯು ಪಕ್ಷಕ್ಕೆ ಗ್ಲಾಮರ್ ಮತ್ತು ಜನಪ್ರಿಯತೆಯ ಬಲ ನೀಡಲಿದೆ. ಮತ್ತೊಂದೆಡೆ, ಶಾರದಾ ಚಿಟ್ ಫಂಡ್ ಪ್ರಕರಣದ ತನಿಖೆಯ ವೇಳೆ ಸುದ್ದಿಯಲ್ಲಿದ್ದ ಮಾಜಿ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರಿಗೂ ಮಣೆ ಹಾಕಲಾಗಿದೆ. ಹಾಗೆಯೇ, ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ಬಂದ ಐತಿಹಾಸಿಕ ಸೆಕ್ಷನ್ 377 ಪ್ರಕರಣದ ಪರ ವಾದ ಮಾಡಿದ್ದ ಖ್ಯಾತ ವಕೀಲೆ ಮೇನಕಾ ಗುರುಸ್ವಾಮಿ ಅವರ ಆಯ್ಕೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಬಾಬುಲ್ ಸುಪ್ರಿಯೋಗೆ ಲಭಿಸಿದ ಪ್ರತಿಫಲ
ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಬಾಬುಲ್ ಸುಪ್ರಿಯೋ, 2021ರಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರಿದ್ದರು. ನಂತರ ಬಾಲಿಗಂಜ್ ಉಪಚುನಾವಣೆಯಲ್ಲಿ ಗೆದ್ದು ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ರಾಜಕೀಯ ನಿಷ್ಠೆ ಮತ್ತು ಬದಲಾದ ಸನ್ನಿವೇಶದಲ್ಲಿ ಅವರು ನೀಡಿದ ಬೆಂಬಲಕ್ಕೆ ಪ್ರತಿಫಲವಾಗಿ ಇದೀಗ ಮೇಲ್ಮನೆಗೆ ಕಳುಹಿಸಲು ಪಕ್ಷ ನಿರ್ಧರಿಸಿದೆ. ಮಾರ್ಚ್ 16 ರಂದು ನಡೆಯಲಿರುವ ಈ ಚುನಾವಣೆಯು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವುದರಿಂದ ರಾಜಕೀಯವಾಗಿ ಮಹತ್ವ ಪಡೆದಿದೆ.
ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ
ಪಶ್ಚಿಮ ಬಂಗಾಳದಿಂದ ಒಟ್ಟು ಐದು ರಾಜ್ಯಸಭಾ ಸ್ಥಾನಗಳು ತೆರವಾಗುತ್ತಿದ್ದು, ಈ ಪೈಕಿ ನಾಲ್ಕು ಸ್ಥಾನಗಳು ಪ್ರಸ್ತುತ ಟಿಎಂಸಂಖ್ಯಾಬಲದ ಲೆಕ್ಕಾಚಾರ ಹೀಗಿದೆಸಿ ವಶದಲ್ಲಿವೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ ಸ್ಪಷ್ಟ ಬಹುಮತ ಹೊಂದಿರುವುದರಿಂದ, ಈ ನಾಲ್ಕೂ ಸ್ಥಾನಗಳನ್ನು ಗೆಲ್ಲುವುದು ಸುಲಭವೆಂದು ಹೇಳಲಾಗುತ್ತಿದೆ. ಉಳಿದ ಒಂದು ಸ್ಥಾನ ವಿರೋಧ ಪಕ್ಷವಾದ ಬಿಜೆಪಿಯ ಪಾಲಾಗುವ ಸಾಧ್ಯತೆಯಿದೆ. ಟಿಎಂಸಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಇವರು ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಘನತೆಯನ್ನು ರಕ್ಷಿಸುವಲ್ಲಿ ಪಕ್ಷದ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ : ‘ನನ್ನ ಮೇಲೆ ನನಗಿಂತ ತಂಡಕ್ಕೆ ನಂಬಿಕೆಯಿತ್ತು’ | ಚೆನ್ನೈ ಅಬ್ಬರದ ಬಳಿಕ ಅಭಿಷೇಕ್ ಶರ್ಮಾ ಭಾವುಕ!



















