ಬೆಂಗಳೂರು : ಪದ್ಮಭೂಷಣ ಪುರಸ್ಕೃತ, ಭಾರತೀಯ ಪತ್ರಿಕೋದ್ಯಮ ಭೀಷ್ಮ ಟಿ.ಜೆ.ಎಸ್ ಜಾರ್ಜ್ ಅವರ ಅಂತ್ಯಕ್ರಿಯೆ ಬೆಂಗಳೂರಿನ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಿಎಂ ಸಿದ್ದರಾಮಯ್ಯ ಅವರು ಚಿತಾಗಾರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದು, ಟಿಜೆಎಸ್ ಗೌರವಾರ್ಥವಾಗಿ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಸಲಾಯ್ತು. ಆ ಬಳಿಕ ಮೂರು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಪೊಲೀಸರು ಗೌರವ ಸಲ್ಲಿಸಿದರು. ಹಲವಾರು ಗಣ್ಯರು ಅಂತ್ಯಕ್ರಿಯೆಲ್ಲಿ ಭಾಗಿಯಾಗಿ ಟಿಜೆಎಸ್ ಜಾರ್ಜ್ ಅವರಿಗೆ ಗೌರವ ನಮನ ಸಲ್ಲಿಸಿದರು.
ವಯೋಸಹಜ ಅನಾರೋಗ್ಯದಿಂದಾಗಿ ಹಿರಿಯ ಪತ್ರಕರ್ತ, ಬರಹಗಾರ ಟಿ.ಜೆ.ಎಸ್. ಜಾರ್ಜ್ ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವು ರಾಜಕೀಯ ಗಣ್ಯರು, ಹಿರಿಯ ಪತ್ರಕರ್ತರು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ಮಾಧ್ಯಮ ಕ್ಷೇತ್ರದ ಪ್ರಮುಖರು, ಅವರ ಬರಹಗಳ ಓದುಗರು, ಶಿಷ್ಯವೃಂದ, ಸ್ನೇಹಿತರು, ಸಂಬಂಧಿಕರು ಶನಿವಾರ ಆಸ್ಪತ್ರೆಗೆ ತೆರಳಿ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.