ಬೆಂಗಳೂರು: ಪತಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದು, ತವರು ಮನೆ ಸೇರುವುದು ಹಾಗೂ ವಿಚ್ಛೇದನ ಪಡೆಯುವುದನ್ನು ನಾವು ನೋಡಿರುತ್ತೇವೆ. ಆದರೆ, ಪತ್ನಿಯ ಕಾಟ ತಾಳಲಾರದೆ ಇಲ್ಲೊಬ್ಬ ಟೆಕ್ಕಿ ಮನೆಯನ್ನೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಅಷ್ಟೇ ಅಲ್ಲ, ಆ ಪತ್ನಿಯು ಪತಿಯನ್ನು ಹುಡುಕಿ ಕೊಡುವಂತೆ ಪ್ರಧಾನಿ ಮೋದಿಯವರನ್ನೇ ಟ್ವಿಟರ್ ಮೂಲಕ ಆಗ್ರಹಿಸಿದ್ದಳು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಬೆಂಗಳೂರು ಪೊಲೀಸರು ನೊಯ್ಡಾದಲ್ಲಿ ಟೆಕ್ಕಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಈಗ ಆತ ಓಡಿ ಹೋಗಿರುವ ಹಿಂದಿನ ಕಾರಣ ಗೊತ್ತಾಗಿ, ಆತನ ಮೇಲೆಯೇ ಎಲ್ಲರಿಗೂ ಅನುಕಂಪ ಮೂಡುವಂತಾಗಿದೆ.
ವಿಪಿನ್ ಗುಪ್ತಾ ಮನೆ ಬಿಟ್ಟು ಹೋಗಿರುವ ಟೆಕ್ಕಿ. ಆತನ ಪತ್ನಿಯ ಹೆಸರು ಶ್ರೀಪರ್ಣಾ ಗುಪ್ತಾ. ಈ ಮಹಿಳೆ ಆ. 11ರಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಒಂದು ಸೆಲ್ಫಿ ವಿಡಿಯೋ ಹಾಕಿದ್ದರು. ನನ್ನ ಪತಿ ನಾಪತ್ತೆಯಾಗಿದ್ದಾರೆ. ಆತನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಕೆಲವು ದಿನಗಳಾದರೂ ಪತಿ ಸಿಕ್ಕ ಬಗ್ಗೆ ಪೊಲೀಸರಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಹೀಗಾಗಿ ನಾನು ಡಿಸಿಪಿ ಅವರನ್ನು ಸಂಪರ್ಕಿಸಿದ್ದೆ.
ಡಿಸಿಪಿಯವರು ಯಾವುದೋ ಅಧಿಕಾರಿಗೆ ಫೋನ್ ಮಾಡಿ ಮಾತನಾಡಿದರು. ಅತ್ತ ಕಡೆ ಮಾತನಾಡಿದ ಅಧಿಕಾರಿಯು, ನಾಪತ್ತೆಯಾಗಿರುವ ಟೆಕ್ಕಿಗೆ ಯಾರಿಗೂ ಹೇಳದೆ ಆಗಾಗ ಗೋವಾಕ್ಕೆ ಹೋಗುವ ಹುಚ್ಚು ಇದೆ. ಹೀಗಾಗಿ ಅಲ್ಲಿಗೆ ಹೋಗಿದ್ದಾರೆ ಎಂದು ಹೇಳಿದ್ದರು. ಆಗ ಡಿಸಿಪಿ ನನ್ನ ಮೇಲೆಯೇ ರೇಗಿದರು. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಳುತ್ತಾ ಗೋಗರೆದಿದ್ದರು.
ಇತ್ತ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಆತನನ್ನು ನೋಯ್ಡಾದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವೇಳೆ ಆ ವ್ಯಕ್ತಿ ಪೊಲೀಸರಿಗೆ ಮನೆ ಬಿಟ್ಟು ಹೋಗಿರುವ ಹಿಂದಿನ ಕಾರಣ ಹೇಳಿದ್ದಾರೆ. ಇದನ್ನು ಕೇಳಿ ಪೊಲೀಸರೇ ಮರಗುತ್ತಿದ್ದಾರೆ. ಹೆಂಡತಿ ತುಂಬಾ ಕಾಟ ಕೊಡ್ತಾರಂತೆ. ಕುಳಿತರು ತಪ್ಪು. ನಿಂತರು ತಪ್ಪು. ಮಾತನಾಡಿದರು ತಪ್ಪು ಎನ್ನುವಂತೆ ನಡೆದುಕೊಳ್ಳುತ್ತಾರಂತೆ. ನನ್ನ ಚಲನವಲನಗಳ ಮೇಲೆ ನಿಗಾ ಇಡಲು ಆಕೆ ಮನೆಯ ತುಂಬಾ ಹಾಗೂ ಮನೆಯ ಹೊರಗೂ ಸಿಸಿಟಿವಿ ಹಾಕಿಸಿದ್ದಾಳೆ. ತನ್ನ ಪ್ರತಿಯೊಂದು ಚಲನವಲನವನ್ನೂ ಗಮನಿಸುವುದರಿಂದ ನನಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದು ಟೆಕ್ಕಿ ಹೇಳಿದ್ದು, ಈ ವಿಷಯ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಹಲವು ಮಹಿಳೆಯರು ಏನು ಗಟ್ಟಿಗಿತ್ತಿಯಮ್ಮ ನೀನು ಅಂದ್ರೆ, ಅದೆಂಥಾ ಕಾಟ ಕೊಟ್ಟಿದಿಯಮ್ಮ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.