ಮಂಗಳೂರು : ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಪ್ರಕರಣದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ಈ ನಿರ್ಧಾರವನ್ನು ಕೈಗೊಂಡಿದೆ.
ಈ ಮೂಲಕ ಕಳೆದ 20 ದಿನಗಳಿಂದ ನಾಪತ್ತೆಯಾಗಿರೋ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಠಾಣೆ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಗೆ ಮೂರು ಬಾರಿ ನೋಟಿಸ್ ನೀಡಿದ್ದರು. ಆದರೆ ಅಜ್ಞಾತವಾಗಿರುವ ತಿಮರೋಡಿ, ಇದುವರೆಗೂ ಯಾವ ನೋಟಿಸ್‌ಗೂ ಉತ್ತರ ನೀಡಿರಲಿಲ್ಲ. ವಿಚಾರಣೆಗೆ ಹಾಜರಾದರೆ ಬಂಧಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕಳೆದ 20 ದಿನಗಳಿಂದ ತಿಮರೋಡಿ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಇದೀಗ ಈ ಅರ್ಜಿಯನ್ನು ತಿರಸ್ಕರಿಸಿದೆ.
ಈ ಹಿನ್ನೆಲೆಯಲ್ಲಿ, ತಿಮರೋಡಿ ಈಗ ಹೈಕೋರ್ಟ್ ಬಾಗಿಲು ತಟ್ಟಲಿದ್ದಾರೆ. ಕೋರ್ಟ್‌ನ ಈ ತೀರ್ಪು ತಿಮರೋಡಿಗೆ ಮತ್ತೊಂದು ಕಾನೂನು ‘ಅಗ್ನಿಪರೀಕ್ಷೆ’ ಆಗಲಿದೆ. ಗಡಿಪಾರು ಆದೇಶದಿಂದ ಕೊಂಚ ನಿರಾಳಗೊಂಡಿದ್ದ ತಿಮರೋಡಿಗೆ, ಇದೀಗ ಈ ಪ್ರಕರಣದಿಂದ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.