ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು 22 ವರ್ಷದ ಆಟಗಾರ ತಿಲಕ್ ವರ್ಮಾ. ಅವರು ಅಜೇಯ ಇನಿಂಗ್ಸ್ನೊಂದಿಗೆ ಭಾರತ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 55 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 72 ರನ್ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಅವರು ಭಾರತ ತಂಡದ ಹಿರಿಯ ಆಟಗಾರರ ರನ್ ಗಳಿಕೆ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ಭಾರತ ಟಿ20 ತಂಡದಲ್ಲಿ ಈಗ ಯುವ ಪ್ರತಿಭೆಗಳಿಗೆ ಮಾತ್ರ ಹೆಚ್ಚು ಅವಕಾಶ ಸಿಗುತ್ತಿವೆ. ಅಬ್ಬರದ ಬ್ಯಾಟಿಂಗ್ ನಡೆಸುವ ಅವರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುತ್ತಿಲ್ಲ ಎಂಬುದೇ ಆಯ್ಕೆಗಾರರ ನಿರ್ಧಾರ. ಈ ರೀತಿಯಾಗಿ ಅವಕಾಶ ಪಡೆಯುವರಲ್ಲಿ ತಿಲಕ್ ವರ್ಮಾ ಕೂಡ ಒಬ್ಬರು. ಅವರು ಆಯ್ಕೆಗಾರರ ನಂಬಿಕೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.
ತಿಲಕ್ ವರ್ಮಾ ಭಾರತ ಪರ ಸತತ 5 ಟಿ20ಐ ಇನ್ನಿಂಗ್ಸ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿದ್ದ ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ ವಿರುದ್ಧ 72 ರನ್ಗಳ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ ಈಗ ಸತತ 5 ಇನ್ನಿಂಗ್ಸ್ಗಳಲ್ಲಿ 338 ರನ್ ಗಳಿಸಿದ್ದಾರೆ. ಹೈದರಾಬಾದ್ ಮೂಲದ ಈ ಆಟಗಾರ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಇನ್ಯಾರು ಇದ್ದಾರೆ?
ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಸತತ 5 ಟಿ20ಐ ಇನ್ನಿಂಗ್ಸ್ಗಳಲ್ಲಿ 327 ರನ್ ಗಳಿಸಿ ದಾಖಲೆ ಬರೆದಿದ್ದರು. ಅವರು ಕೆಲವು ತಿಂಗಳ ಹಿಂದೆ ಈ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ತಿಲಕ್ ವರ್ಮಾ ಕಸಿದುಕೊಂಡಿದ್ದಾರೆ. ಟಿ20 ತಂಡದಲ್ಲಿ ಸದ್ಯ ಸ್ಥಾನ ಪಡೆಯಲು ವಿಫಲವಾಗುತ್ತಿರುವ ಕೆಎಲ್ ರಾಹುಲ್ ಸತತ 5 ಇನ್ನಿಂಗ್ಸ್ಗಳಲ್ಲಿ 303 ರನ್ ಗಳಿಸಿದ್ದು ಅವರಿಗೆ ಈಗ ಮೂರನೇ ಸ್ಥಾನ ಲಭಿಸಿದೆ.
ವಿಶ್ವ ಕಪ್ ಬಳಿಕ ಟಿ20ಐ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಸತತ 5 ಇನ್ನಿಂಗ್ಸ್ಗಳಲ್ಲಿ 295 ರನ್ ಗಳಿಸಿದ್ದಾರೆ. ಭಾರತದ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಸತತ 5 ಟಿ20ಐ ಇನ್ನಿಂಗ್ಸ್ಗಳಲ್ಲಿ 294 ರನ್ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.