ಹೈದರಾಬಾದ್: ಏಷ್ಯಾ ಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಯುವ ಬ್ಯಾಟರ್ ತಿಲಕ್ ವರ್ಮಾ, ಮೈದಾನದಲ್ಲಿ ಎದುರಾಳಿಗಳ ಆಕ್ರಮಣಕಾರಿ ವರ್ತನೆಗೆ ನಮ್ಮ ಗೆಲುವೇ ತಕ್ಕ ಪ್ರತ್ಯುತ್ತರವಾಗಿತ್ತು ಎಂದು ಹೇಳಿದ್ದಾರೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಜೇಯ 69 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅವರು, ಹೈದರಾಬಾದ್‌ಗೆ ಆಗಮಿಸಿದ ನಂತರ ತಮ್ಮ ಅನುಭವವನ್ನು ಹಂಚಿಕೊಂಡರು.
ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಪಾಕಿಸ್ತಾನದ ಆಟಗಾರರು ಅನಗತ್ಯ ಹೇಳಿಕೆಗಳ ಮೂಲಕ ಕೆಣಕಲು ಯತ್ನಿಸಿದರು ಎಂದು ತಿಲಕ್ ವರ್ಮಾ ಬಹಿರಂಗಪಡಿಸಿದ್ದಾರೆ. “ನಾನು ಕ್ರೀಸ್‌ಗೆ ಬಂದಾಗ ಆರಂಭದಲ್ಲಿ ಸ್ವಲ್ಪ ಒತ್ತಡ ಮತ್ತು ಆತಂಕವಿತ್ತು. ಆದರೆ ನನ್ನ ದೇಶಕ್ಕಾಗಿ ಪಂದ್ಯ ಗೆಲ್ಲಬೇಕೆಂದು ನಾನು ದೃಢವಾಗಿ ನಿರ್ಧರಿಸಿದ್ದೆ. ಆ ಕ್ಷಣದಲ್ಲಿ ನಾನು ಒತ್ತಡಕ್ಕೆ ಒಳಗಾದರೆ, ನನ್ನನ್ನು ಮತ್ತು 140 ಕೋಟಿ ಭಾರತೀಯರನ್ನು ನಿರಾಸೆಗೊಳಿಸುತ್ತೇನೆ ಎಂಬ ಅರಿವಿತ್ತು” ಎಂದು ಅವರು ಹೇಳಿದರು. “ಪಾಕಿಸ್ತಾನದ ಆಟಗಾರರು ನನ್ನನ್ನು ತೀವ್ರವಾಗಿ ಕೆಣಕಲು ಯತ್ನಿಸಿದರು, ಆದರೆ ನಾನು ಮೌನವಾಗಿಯೇ ನನ್ನ ಬ್ಯಾಟ್ ಮೂಲಕ ಅವರಿಗೆ ಉತ್ತರ ನೀಡಿದೆ. ನಮ್ಮ ಉತ್ತಮ ಉತ್ತರವೆಂದರೆ ಪಂದ್ಯವನ್ನು ಗೆಲ್ಲುವುದಾಗಿತ್ತು, ನಾವು ಅದನ್ನೇ ಮಾಡಿದೆವು” ಎಂದು ತಿಲಕ್ ತಿಳಿಸಿದರು.
ನಡೆಯಬಾರದ್ದು ನಡೆದಿದೆ
ಭಾರತ-ಪಾಕಿಸ್ತಾನ ಪಂದ್ಯಗಳ ವೇಳೆ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿದ ಅವರು, “ಪಂದ್ಯದ ನಡುವೆ ಅನೇಕ ಸಂಗತಿಗಳು ನಡೆದಿವೆ. ಅವುಗಳನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಅವು ಆಟದ ಒಂದು ಭಾಗ. ನಮ್ಮ ಸಂಪೂರ್ಣ ಗಮನವು ಪಂದ್ಯವನ್ನು ಗೆಲ್ಲುವುದರ ಮೇಲೆ ಕೇಂದ್ರೀಕೃತವಾಗಿತ್ತು” ಎಂದು ತಿಳಿಸಿದರು. ಈ ಪಂದ್ಯವನ್ನು ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಅವರು ಬಣ್ಣಿಸಿದ್ದಾರೆ.
ಹೈದರಾಬಾದ್‌ನಲ್ಲಿ ಭವ್ಯ ಸ್ವಾಗತ
ಏಷ್ಯಾ ಕಪ್ ಗೆಲುವಿನ ರೂವಾರಿಯಾಗಿ ತವರಿಗೆ ಮರಳಿದ ತಿಲಕ್ ವರ್ಮಾಗೆ ಹೈದರಾಬಾದ್‌ನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಅಭಿಮಾನಿಗಳು ಅವರ ಹೆಸರನ್ನು ಕೂಗುತ್ತಾ ಸಂಭ್ರಮಿಸಿದರು. ತೆಲಂಗಾಣ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ಸನ್ಮಾನಿಸಿದರು.
22ರ ಹರೆಯದ ತಿಲಕ್ ವರ್ಮಾ, ಹೈದರಾಬಾದ್‌ನ ಸಾಮಾನ್ಯ ಕುಟುಂಬದಿಂದ ಬಂದವರು. ಅವರ ತಂದೆ ಎಲೆಕ್ಟ್ರಿಷಿಯನ್ ಆಗಿದ್ದರೂ, ಮಗನ ಕ್ರಿಕೆಟ್ ಆಸಕ್ತಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಕಠಿಣ ಪರಿಶ್ರಮ ಮತ್ತು ತಮ್ಮ ಕೋಚ್ ಸಲಾಮ್ ಬಯಾಶ್ ಅವರ ಮಾರ್ಗದರ್ಶನದಿಂದ ತಿಲಕ್, ಇಂದು ಭಾರತೀಯ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ