ಆಂಗ್ಲರ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ಆಟಗಾರರು ರೋಚಕ ಗೆಲುವು ಸಾಧಿಸಿದ್ದಾರೆ. ಎರಡು ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಭಾರತ ತಂಡ 5 ಪಂದ್ಯಗಳ ಟೂರ್ನಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.
ಭಾರತೀಯ ತಂಡದ ಆಟಗಾರ ತಿಲಕ್ ವರ್ಮಾ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಗೆಲುವಿನ ತಿಲಕ ಇಟ್ಟಿದ್ದಾರೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಔಟ್ ಆಗದೆ, 72 ರನ್ ಗಳಿಸಿದರು. ಪರಿಣಾಮ ಭಾರತ ತಂಡ ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಸೇರಿಸಿತ್ತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ, 19.2 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ಜಯದ ನಗೆ ಬೀರಿತು.
ಇಂಗ್ಲೆಂಡ್ ಪರ ಜೋಸ್ ಬಟ್ಲರ್ 45 ರನ್ ಮತ್ತು ಬ್ರೇಡನ್ ಕಾರ್ಸೆ 31 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತದ ಪರ ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಇಂಗ್ಲೆಂಡ್ನ ಇಬ್ಬರೂ ಆರಂಭಿಕ ಆಟಗಾರರು ಮತ್ತೆ ಭಾರತೀಯ ಬೌಲರ್ ಗಳ ಬಿಗಿ ದಾಳಿಗೆ ಶರಣಾದರು. ಸಾಲ್ಟ್ 4 ಹಾಗೂ ಡಕೆಟ್ 3 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ತಲಾ 13 ರನ್ ಕೊಡುಗೆ ನೀಡಿದರು. ಜೇಮಿ ಸ್ಮಿತ್ 22 , ಜೇಮಿ ಓವರ್ಟನ್ 5, ಆದಿಲ್ ರಶೀದ್ 10, ಜೋಫ್ರಾ ಆರ್ಚರ್ ಅಜೇಯ 12 ಮತ್ತು ಮಾರ್ಕ್ ವುಡ್ ಅಜೇಯ 5 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ್ದ ಭಾರತ ತಂಡಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ವರ್ಮಾ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಡವಿದರು. ಸಂಜು ಸ್ಯಾಮ್ಸನ್(5), ಅಭಿಷೇಕ್ ವರ್ಮಾ(12) ರನ್ ಗಳಿಗೆ ಸುಸ್ತಾದರು. ಒಂದೆಡೆ ತಿಲಕ್ ವರ್ಮಾ ನೆಲಕಚ್ಚಿ ಕೊನೆಯವರೆಗೂ ಆಟವಾಡುತ್ತ ಸಾಗಿದರು. ಸೂರ್ಯಕುಮಾರ್ ಯಾದವ್(12), ಧೃವ ಜುರೇಲ್(4), ಹಾರ್ದಿಕ್ ಪಾಂಡ್ಯ (7), ವಾಷಿಂಗ್ಟನ್ ಸುಂದರ್(26), ವಾಷಿಂಗ್ಟನ್ ಸುಂದರ್(26), ಅಕ್ಸರ್ ಪಟೇಲ್ (2), ಅರ್ಷದೀಪ್ ಸಿಂಗ್(6) ಹಾಗೂ ರವಿ ಬಿಷ್ನೋಯಿ ಔಟ್ ಆಗದೆ 9 ರನ್ ಗಳಿಸಿದರು.