ಬೆಂಗಳೂರು: ಜಾತಿ, ಧರ್ಮ, ಭಾಷೆ ಸೇರಿ ಯಾವುದೇ ವಿಷಯಗಳನ್ನು ಇಟ್ಟುಕೊಂಡು ದ್ವೇಷ ಕಾರುವವರು, ದ್ವೇಷ ಭಾಷಣ ಮಾಡುವ ಪ್ರಕರಣಗಳು ಆಗಾಗ ಸುದ್ದಿಯಲ್ಲಿ ಇದ್ದೇ ಇರುತ್ತವೆ. ಇಂತಹ ದ್ವೇಷ ಭಾಷಣಗಳನ್ನು (Hate Speech) ನಿಯಂತ್ರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ದ್ವೇಷ ಭಾಷಣ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೊಳಿಸಲು ಇದೇ ಬಜೆಟ್ ಅಧಿವೇಶದನಲ್ಲಿ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಯಾವುದೇ ಜಾತಿ, ಧರ್ಮ, ಭಾಷೆ ಸೇರಿ ಹಲವು ವಿಷಯಗಳ ಕುರಿತು ದ್ವೇಷ ಭಾಷಣ ಮಾಡುವವರು, ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡುವವರಿಗೆ ಮೂರು ವರ್ಷ ಜೈಲು ಹಾಗೂ ದಂಡ ವಿಧಿಸುವ ಕಾನೂನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ತೀರ್ಮಾನಿಸಿದೆ.
ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ನಿಯಂತ್ರಣ ಹಾಗೂ ಶಿಕ್ಷೆ) ವಿಧೇಯಕ-2025ರ ಕರಡು ತಯಾರಿಕೆಯಲ್ಲಿ ಕಾನೂನು ಇಲಾಖೆ ತೊಡಗಿದೆ. ಕೆಲವೇ ದಿನಗಳಲ್ಲಿ ಕರ್ನಾಟಕ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿಯೇ ಮಸೂದೆಯನ್ನು ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಧರ್ಮ, ಜಾತಿ, ಸಮುದಾಯ, ಭಾಷೆ, ಲಿಂಗ, ಜನ್ಮಸ್ಥಳ, ಅಂಗವೈಕಲ್ಯ ಸೇರಿ ಯಾವುದೇ ರೀತಿಯಲ್ಲಿ ದ್ವೇಷ ಭಾಷಣ ಮಾಡುವುದನ್ನು ಹೊಸ ಕಾನೂನು ನಿಯಂತ್ರಿಸುತ್ತದೆ. ದ್ವೇಷ ಭಾಷಣ ಸಾಬೀತಾದರೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸುವ ದಿಸೆಯಲ್ಲಿ ವಿಧೇಯಕ ಸಿದ್ಧಪಡಿಸಲಾಗುತ್ತಿದೆ. ಕರಡು ಸಿದ್ಧವಾದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು, ನಂತರ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.