ಪಾಟ್ನಾ: ಪಾಕಿಸ್ತಾನ ಮೂಲದ ‘ಜೈಶ್-ಎ-ಮೊಹಮ್ಮದ್’ ಉಗ್ರ ಸಂಘಟನೆಗೆ ಸೇರಿದ ಮೂವರು ಶಂಕಿತ ಉಗ್ರರು ನೇಪಾಳದ ಗಡಿ ಮೂಲಕ ಬಿಹಾರವನ್ನು ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆಯ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಬಿಹಾರ ಪೊಲೀಸ್ ಪ್ರಧಾನ ಕಚೇರಿಯು ಶಂಕಿತರ ಗುರುತನ್ನು ಬಹಿರಂಗಪಡಿಸಿದೆ. ಅವರೆಂದರೆ, ಹಸ್ನೇನ್ ಅಲಿ (ರಾವಲ್ಪಿಂಡಿ), ಆದಿಲ್ ಹುಸೇನ್ (ಉಮರ್‌ಕೋಟ್) ಮತ್ತು ಮೊಹಮ್ಮದ್ ಉಸ್ಮಾನ್ (ಬಹಾವಲ್‌ಪುರ). ಈ ಮೂವರು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ಗುಪ್ತಚರ ವರದಿಗಳ ಪ್ರಕಾರ, ಈ ಉಗ್ರರು ಆಗಸ್ಟ್ ಎರಡನೇ ವಾರದಲ್ಲಿ ಕಠ್ಮಂಡುವಿಗೆ ತಲುಪಿದ್ದು, ಕಳೆದ ವಾರ ಬಿಹಾರವನ್ನು ಪ್ರವೇಶಿಸಿದ್ದಾರೆ.
ಭದ್ರತೆ ಮತ್ತು ತೀವ್ರ ನಿಗಾ
ಗುಪ್ತಚರ ಇಲಾಖೆಯ ಎಚ್ಚರಿಕೆಯ ನಂತರ, ಬಿಹಾರ ಪೊಲೀಸ್ ಪ್ರಧಾನ ಕಚೇರಿಯು ಉಗ್ರರ ಪಾಸ್‌ಪೋರ್ಟ್ ವಿವರಗಳು ಮತ್ತು ಭಾವಚಿತ್ರಗಳನ್ನು ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಭದ್ರತಾ ಸಂಸ್ಥೆಗಳಿಗೆ ಕಣ್ಗಾವಲು ಹೆಚ್ಚಿಸಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗುಪ್ತಚರ ಘಟಕಗಳಿಗೆ ಆದೇಶಿಸಲಾಗಿದೆ.
ನೇಪಾಳ ಗಡಿಯುದ್ದಕ್ಕೂ ಕಟ್ಟೆಚ್ಚರ
ಬಿಹಾರವು ನೇಪಾಳದೊಂದಿಗೆ ಸುಮಾರು 729 ಕಿಲೋಮೀಟರ್ ಉದ್ದದ ತೆರೆದ ಗಡಿಯನ್ನು ಹಂಚಿಕೊಂಡಿದೆ. ಇದು ನುಸುಳುಕೋರರಿಗೆ ಪ್ರಮುಖ ಹಾಟ್‌ಸ್ಪಾಟ್ ಆಗಿದೆ. ರಾಜ್ಯದ ಏಳು ಜಿಲ್ಲೆಗಳು ನೇರವಾಗಿ ಈ ಗಡಿಗೆ ಹೊಂದಿಕೊಂಡಿರುವುದರಿಂದ ನಿರಂತರ ಕಣ್ಗಾವಲು ಮತ್ತು ಭದ್ರತೆಯನ್ನು ಜಾರಿಗೊಳಿಸುವುದು ಒಂದು ದೊಡ್ಡ ಸವಾಲಾಗಿದೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಮಧುಬನಿ, ಸೀತಾಮರ್ಹಿ, ಸುಪೌಲ್, ಅರಾರಿಯಾ, ಮತ್ತು ಪೂರ್ವ ಹಾಗೂ ಪಶ್ಚಿಮ ಚಂಪಾರಣ್ ಜಿಲ್ಲೆಗಳು ಸೇರಿದಂತೆ ಗಡಿ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಲಾಗಿದೆ.



















