ಬೆಂಗಳೂರು: ತೀವ್ರವಾದ ಮೂಳೆ ಗಾಯಗಳಿಂದ ಬಳಲುತ್ತಿದ್ದ ಮೂವರು ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ, ಬೆಂಗಳೂರಿನ ಯಲಹಂಕದಲ್ಲಿರುವ ಸ್ಪರ್ಶ್ ಆಸ್ಪತ್ರೆಯ ವೈದ್ಯರು ಅವರಿಗೆ ಹೊಸ ಬದುಕನ್ನು ನೀಡಿದ್ದಾರೆ. ರೊಟೇಟರ್ ಕಫ್ ಟಿಯರ್ (ಭುಜದ ಗಾಯ), ಪ್ರಾಕ್ಸಿಮಲ್ ಟಿಬಿಯಾ ಫ್ರ್ಯಾಕ್ಚರ್ (ಮಂಡಿಯ ಗಾಯ) ಮತ್ತು ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (ACL) ಟಿಯರ್‌ನಂತಹ ಗಂಭೀರ ಸಮಸ್ಯೆಗಳಿಗೆ, ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೊಪೆಡಿಕ್ ಸರ್ಜನ್ ಡಾ. ಚೇತನ್ ಮುರಳಿಧರ ದೋಜೋಡೆ ಅವರ ನೇತೃತ್ವದ ತಂಡವು ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ.
ಈ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಮಾತನಾಡಿದ ಡಾ. ಚೇತನ್, “ಮೂರೂ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿದ್ದು, ರೋಗಿಗಳು ನಿಗದಿತ ಫಿಸಿಯೋಥೆರಪಿ ಮತ್ತು ನಿಯಮಿತ ತಪಾಸಣೆಯ ಮೂಲಕ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ರೋಗಿಗಳು ಆದಷ್ಟು ಬೇಗ ತಮ್ಮ ಸಹಜ ಜೀವನಕ್ಕೆ ಮರಳುವಂತೆ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ. ಮೂಳೆ ಶಸ್ತ್ರಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನಗಳು, ಇಂತಹ ಗಾಯಗಳಿಗೆ ಹೆಚ್ಚು ನಿಖರವಾಗಿ, ಕಡಿಮೆ ನೋವಿನೊಂದಿಗೆ ಮತ್ತು ವೇಗದ ಪುನಶ್ಚೇತನದೊಂದಿಗೆ ಚಿಕಿತ್ಸೆ ನೀಡಲು ನಮಗೆ ಅವಕಾಶ ಮಾಡಿಕೊಟ್ಟಿವೆ,” ಎಂದರು.
ಪ್ರಕರಣ 1: ಶಿವಮೊಗ್ಗದ 61 ವರ್ಷದ ವ್ಯಕ್ತಿಯೊಬ್ಬರು ರೊಟೇಟರ್ ಕಫ್ ಟಿಯರ್‌ನಿಂದಾಗಿ ಎಡ ಭುಜದಲ್ಲಿ ತೀವ್ರ ನೋವು ಮತ್ತು ದೌರ್ಬಲ್ಯವನ್ನು ಅನುಭವಿಸುತ್ತಿದ್ದರು. ಅವರಿಗೆ, ವೈದ್ಯರು ‘ಆರ್ಥ್ರೋಸ್ಕೋಪಿಕ್ ರೊಟೇಟರ್ ಕಫ್ ರಿಪೇರಿ ವಿತ್ ಅಕ್ರೋಮಿಯೋಪ್ಲ್ಯಾಸ್ಟಿ’ ಎಂಬ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಭುಜ ಸರಿಯಾಗಿ ಕೆಲಸ ಮಾಡುವಂತೆ ಮಾಡಿದ್ದಾರೆ.
ಪ್ರಕರಣ 2: 54 ವರ್ಷದ ಮಹಿಳೆಯೊಬ್ಬರು ಬಿದ್ದ ಪರಿಣಾಮವಾಗಿ ಎಡಗಾಲಿನ ಮೇಲ್ಭಾಗದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಅವರಿಗೆ, ವೈದ್ಯರು ‘ಬೈಕಾಲಮ್ನಾರ್ ಪ್ಲೇಟಿಂಗ್’ ಪ್ರಕ್ರಿಯೆಯ ಮೂಲಕ, ಸಿ-ಆರ್ಮ್ ಮಾರ್ಗದರ್ಶನದಲ್ಲಿ ಸರ್ಜಿಕಲ್ ಪ್ಲೇಟ್‌ಗಳನ್ನು ಬಳಸಿ, ಮೂಳೆಯನ್ನು ಜೋಡಿಸಿ ಸ್ಥಿರಗೊಳಿಸಿದ್ದಾರೆ.
ಪ್ರಕರಣ 3: 53 ವರ್ಷದ ಇನ್ನೊಬ್ಬ ಮಹಿಳೆಯ ಎಡ ಮೊಣಕಾಲಿನ ಅಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (ACL) ಹರಿದುಹೋಗಿತ್ತು. ಅವರಿಗೆ ‘ಆರ್ಥ್ರೋಸ್ಕೋಪಿಕ್ ಎಸಿಎಲ್ ರೀಕನ್‌ಸ್ಟ್ರಕ್ಷನ್’ ಎಂಬ ಕೀ-ಹೋಲ್ ಶಸ್ತ್ರಚಿಕಿತ್ಸೆಯ ಮೂಲಕ, ಕೀಲಿನ ಸ್ಥಿರತೆಯನ್ನು ಮರುಸ್ಥಾಪಿಸಲಾಘಿದೆ.
ಭುಜದ ನೋವು, ಕಾಲಿನ ಮುರಿತ ಮತ್ತು ಅಸ್ಥಿರಜ್ಜು ಗಾಯಗಳು, ವಿಶೇಷವಾಗಿ ಯುವಕರಲ್ಲಿ ಮತ್ತು ಕ್ರಿಯಾಶೀಲ ಜೀವನಶೈಲಿ ಹೊಂದಿರುವವರಲ್ಲಿ ಸಾಮಾನ್ಯ. ಆದರೆ, ಚಿಕಿತ್ಸೆಯಲ್ಲಿ ವಿಳಂಬವಾದರೆ, ಅದು ದೀರ್ಘಕಾಲದ ಚಲನಶೀಲತೆಯ ಸಮಸ್ಯೆಗಳಿಗೆ ಮತ್ತು ದೀರ್ಘಕಾಲದ ನೋವಿಗೆ ಕಾರಣವಾಗಬಹುದು. ಶೀಘ್ರ ರೋಗನಿರ್ಣಯ, ಶಸ್ತ್ರಚಿಕಿತ್ಸೆಯ ತಿದ್ದುಪಡಿ ಮತ್ತು ಫಿಸಿಯೋಥೆರಪಿ, ಸಾಮಾನ್ಯ ಚಲನೆಯನ್ನು ಮರಳಿ ಪಡೆಯಲು ಮತ್ತು ಮುಂದಿನ ತೊಂದರೆಗಳನ್ನು ತಡೆಯಲು ಪ್ರಮುಖವಾಗಿವೆ ಎಂದು ವೈದ್ಯರು ಒತ್ತಿಹೇಳಿದ್ದಾರೆ.
ಇದನ್ನೂ ಓದಿ: 21 ಸಾವಿರ ರೂ. ಹೂಡಿಕೆಗೆ 3.5 ಲಕ್ಷ ರೂ. ರಿಟರ್ನ್ಸ್: ಈ ವಂಚನೆ ಜಾಲಕ್ಕೆ ಎಂದಿಗೂ ಸಿಲುಕದಿರಿ



















