ಒಂದು ಕಾಳು ಬಿತ್ತಿ ಸಾವಿರ ಕಾಳು ನೀಡುವ ತಾಯಿಯೆಂದರೆ ಅದು ಭೂಮಿ ತಾಯಿ. ಭಾರತೀಯ ಕೃಷಿ ಪರಂಪರೆಯಲ್ಲಿ ಕೃಷಿ ಭೂಮಿಯನ್ನು ತಾಯಿಯೆಂದೇ ಪರಿಗಣಿಸಲಾಗುತ್ತದೆ. ಈ ಭೂಮಿ ತಾಯಿ ರೈತಾಪಿ ವರ್ಗದ ಜೀವಾಳ. ಆಕೆಯನ್ನೂ ಪೂಜಿಸುವ ಮತ್ತು ಆರಾಧಿಸುವ ಹಬ್ಬವೊಂದಿದೆ. ಅದುವೇ ಸೀಗೆ/ಸೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ. ದಸರಾ ಹಬ್ಬದಲ್ಲಿ ಬನ್ನಿ ಮುಡಿದ ರೈತರು, ಇದೀಗ ಸೀಗೆ ಹುಣ್ಣಿಮೆ ಸಡಗರದಲ್ಲಿದ್ದಾರೆ. ಕರ್ನಾಟಕದಲ್ಲಿ ಈ ಹುಣ್ಣಿಮೆಯ ಆಚರಣೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಮಲೆನಾಡ ಭಾಗದ ರೈತರಿಗಿದು ಇದೊಂದು ಸಡಗರದ ಹಬ್ಬವಾಗಿದೆ.
“ಸೀಗಿ ಹುಣ್ಣಿಮೆ ಬುಟ್ಟಿಯ ಚಿತ್ತಾರ“
ಸೀಗಿ ಹುಣ್ಣಿಮೆ ಆಗಮನಕ್ಕೆ ಮುಂಚೆ ಅಂದರೆ ದಸರಾ ಹಬ್ಬದಂದು ಎರಡು(ಒಂದು ದೊಡ್ಡದು, ಇನ್ನೊಂದು ಚಿಕ್ಕದು) ಬಿದುರಿನ ಬಟ್ಟಿಯನ್ನು ಸಗಣಿ ಮತ್ತು ಕೆಮ್ಮಣ್ಣಿನಿಂದ ಸಾರಿಸಿ ಸಿದ್ಧಪಡಿಸಿ ಪೂಜೆ ಮಾಡಿ ನಂತರ ಆ ಬುಟ್ಟಿಗಳಿಗೆ ಅಕ್ಕಿ ಹಿಟ್ಟಿನಿಂದ ರೈತಾಪಿ ಕೆಲಸಗಳಿಗೆ ಸಂಬಂಧಿಸಿದ ಚಿತ್ರ, ಹಸೆ ಚಿತ್ರಗಳನ್ನು ಬರೆದು ಅಲಂಕರಿಸುತ್ತಾರೆ. ಆ ಬುಟ್ಟಿಯಲ್ಲಿಯೇ ಭೂತಾಯಿಗೆ ಬಗೆಬಗೆ ಖಾದ್ಯಗಳನ್ನು ಹೊತ್ತೊಯ್ಯಲಾಗುತ್ತದೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ರೀತಿಯ ಆಚರಣೆ ಇದೆ.

“ಬಗೆಬಗೆ ಖಾದ್ಯದ ಘಮ“
ಇತ್ತ ಮನೆಯ ಹೆಣ್ಣು ಮಕ್ಕಳು ಬೆಳಗಿನ ನಾಲ್ಕರಿಂದಲೇ ಈ ಹಬ್ಬಕ್ಕೆ ಬೇಕಾದ ಅಡುಗೆ ಮಾಡುವುದರಲ್ಲಿ ನಿರತರಾಗುತ್ತಾರೆ. ಹೋಳಿಗೆ, ಬುತ್ತಿ, ಏಳು ಅಥವಾ ಒಂಭತ್ತು ತರಹದ ಪಲ್ಯ, ವಿಶೆಷವಾಗಿ ಅಮ್ಮಟೆಕಾಯಿ ಪಲ್ಯ, ಸೌತೆಕಾಯಿ ಕಡುಬು, ಮನೆಯಲ್ಲಿ ಬೆಳೆದಿರುವ ಎಲ್ಲಾ ಸೊಪ್ಪು, ತರಕಾರಿ, ಅಕ್ಕಿಯನ್ನು ಹಾಕಿ ಬೇಯಿಸಿ ಚೆರಗ ಅಥವಾ ಸಾಗುಸೊಪ್ಪು ಸೀಗೆ ಹುಣ್ಣಿಮೆ ದಿನ ಚರಗ ಚೆಲ್ಲುವುದು ಹಬ್ಬದ ಪ್ರಮುಖ ಕೆಲಸ. ಚರಗ ಚೆಲ್ಲುವುದಕ್ಕೆ ಭೂತಾಯಿ ನಮಗೆ ಕೊಟ್ಟಿದ್ದನ್ನು ನಾವು ಮರಳಿ ಕೊಡುವ ಕಾಯಕ ಎನ್ನಲಾಗುತ್ತದೆ. ಅದನ್ನು ಭೂಮಿ ಪೂಜೆಯ ಸಮಯದಲ್ಲಿ ತಾಯಿಗೆ ನಾವು ಮಾಡಿರುವ ಎಲ್ಲಾ ಖಾದ್ಯಗಳನ್‌ನು ನೈವೇದ್ಯ ಮಾಡಿ, ನಂತರ ಮನೆಮಂದಿ ಎಲ್ಲಾ ಗದ್ದೆಯಲ್ಲಿಯೇ ಊಟ ಮಾಡುತ್ತಾರೆ. ನಂತರ ಹೊಲ ಗದ್ದೆಗಳಿಗೆ ಚದುರಿಸಲಾಗುತ್ತದೆ.

“ಸೀಗೆ ಹುಣ್ಣಿಮೆ ಹಬ್ಬ ಪೂಜೆ“
ಭೂತಾಯಿಯ ಸಿಮಂತದ ದಿನ ಬೆಳಗಿನ ಜಾವ, ಸೀಗೆಹುಣ್ಣಿಮೆ ಬುಟ್ಟಿಯಲ್ಲಿ ಮಾಡಿರುವಂತಹ ಎಲ್ಲಾ ಅಡುಗೆಗಳನ್ನು ಹಾಕಿಕೊಂಡು ಇನ್ನೊಂದು ಬುಟ್ಟಿಯಲ್ಲಿ ಚರಗವನ್ನು ತುಂಬಿಕೊಂದು ಹೋಗಿ ಭೂತಾಯಿಗೆ ನೈವೇದ್ಯ ಮಾಡಿ, ಕೆಂಪು ಅಥವಾ ಹಸಿರು ಬಣ್ಣದ ದಾರವನ್ನು ಭೂಮಿತಾಯಿಯು ನೀಡಿದ ರಕ್ಷಾಬಂಧವಾಗಿ ಬಲಗೈಗೆ ಕಟ್ಟಿಕೊಳ್ಳುವರು. ಪೂಜೆಮಾಡಿದ ಗದ್ದೆಯಲ್ಲೇ ಅರಿಷಿಣದ ಎಲೆಯ ಸೌತೆಕಾಯಿ ಕಡುಬನ್ನು ಹುಗಿದು ಬರುವರು. ಅರಿಷಿಣದ ಎಲೆಯು ಕ್ರಿಮಿ ನಿರೋಧಕವಾದುದು. ಆ ರೈತರು ಎಲ್ಲಾ ಭತ್ತದ ಗದ್ದೆಗಳ ಕೊಯ್ದು ಮುಗಿದು ಮತ್ತು ಮೊದಲ ಒಕ್ಕಲು ಹಾಕಿದ ದಿನ ಹುಗಿದಿಟ್ಟ ಕಡುಬನ್ನು ಕಿತ್ತು ತಂದು ಅಕ್ಕಿಯ ಹಿಟ್ಟಿನೊಂದಿಗೆ ಬೆರಸಿ ‘ಹುರೋಳಿಗೆ’ ರೊಟ್ಟಿಯೆಂದು ಕಣ ಹಾಗು ಬಣವೆಗಳಿಗೆ ಚೂರುಮಾಡಿ ಚೆಲ್ಲಿ ಉಳಿದಿದ್ದನ್ನು ತಾವೂ ತಿನ್ನುವರು. ಕೈಗೆ ಕಟ್ಟಿಕೊಂಡಿದ್ದ ಭೂಮಿದಾರವನ್ನು ಬಿಚ್ಚಿ ಭತ್ತದ ಗೊಣಬೆಗೆ ಕಟ್ಟುತ್ತಾರೆ.



















