ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ನಂತರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಆಡುವ ಕನಸು ದೂರಕ್ಕೆ ಹೋಗಿದೆ. ಹೀಗಾಗಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮಹತ್ವ ಪಡೆದಿದ್ದು, ಭಾರತ ಇಲ್ಲಿ ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಮೋಘ ಗೆಲುವು ಸಾಧಿಸಿದರೆ ಮಾತ್ರ ನೇರವಾಗಿ ಫೈನಲ್ ಪ್ರವೇಶ ಮಾಡಬಹುದು. ಇಲ್ಲವಾದರೆ, ಬೇರೆ ಬೇರೆ ಆಯ್ಕೆಗಳಿಗಾಗಿ ಕಾಯ್ದು ಕುಳಿತುಕೊಳ್ಳಬಹುದು. ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಯಾವುದೇ ಪಂದ್ಯ ಸೋಲದೆ, 5-0 ಅಥವಾ 4-0 ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆ ನೇರವಾಗಿ ಪ್ರವೇಶ ಪಡೆಯಲಿದೆ. ಅಲ್ಲದೇ, ಸರಣಿಯಲ್ಲಿ 4 ಜಯ ಹಾಗೂ 1 ಡ್ರಾ ಸಾಧಿಸುವುದು ಅನಿವಾರ್ಯವಾಗಿದೆ.
ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದರೆ ಅಥವಾ 3-1, 3-0 ಅಂತರದಿಂದ ಜಯ ಸಾಧಿಸಿದರೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುವ ಸರಣಿಯನ್ನು ಎದುರು ನೋಡಬೇಕಾಗುತ್ತದೆ. ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಮಾತ್ರ ಭಾರತ ತಂಡ 4-1, 3-1, 3-0 ಅಂತರದಿಂದ ಗೆದ್ದರೂ ಫೈನಲ್ ಪ್ರವೇಶಿಸುತ್ತದೆ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳಲ್ಲಿ ಜಯ ಸಾಧಿಸಿ, 3 ಮ್ಯಾಚ್ಗಳನ್ನು ಡ್ರಾ ಮಾಡಿಕೊಂಡರೂ, ಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಫಲಿತಾಂಶ ನೋಡಬಹುದು. ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ 1 ಜಯ ಸಾಧಿಸುವುದು ಭಾರತಕ್ಕೆ ಅನಿವಾರ್ಯವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಜಯ ಸಾಧಿಸಿದರೆ, ಎರಡು ತಂಡಗಳ ಫಲಿತಾಂಶ ನಿರ್ಣಾಯಕವಾಗಲಿದೆ. ಆಗ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ 1 ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಬೇಕು. ಹಾಗೆಯೇ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ನಲ್ಲಿ ಡ್ರಾ ಸಾಧಿಸುವುದು ಭಾರತದ ಪಾಲಿಗೆ ಅನಿವಾರ್ಯವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧ 2-1 ಅಥವಾ 1-0 ಅಂತರದಿಂದ ಸರಣಿ ಗೆದ್ದರೆ ಅಥವಾ 1-1 ಅಂತರದಿಂದ ಸರಣಿಯನ್ನು ಡ್ರಾ ಮಾಡಿಕೊಂಡರೆ, ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ಕೇವಲ 1 ಟೆಸ್ಟ್ ಪಂದ್ಯದಲ್ಲಿ ಮಾತ್ರ ಗೆಲ್ಲುವುದನ್ನು ಎದುರು ನೋಡಬೇಕು. ಅಲ್ಲದೇ, ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ನಲ್ಲಿ ಡ್ರಾ ಸಾಧಿಸುವುದು ಭಾರತದ ಪಾಲಿಗೆ ಅನಿವಾರ್ಯವಾಗಲಿದೆ.
ಟೆಸ್ಟ್ ಸರಣಿಯು 2-2 ಅಂತರದಲ್ಲಿ ಅಂತ್ಯಗೊಂಡರೆ, ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭವಿಷ್ಯವನ್ನು ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಿರ್ಧರಿಸಲಿದೆ. ಅಂದರೆ ಇಂಗ್ಲೆಂಡ್ ಒಂದು ಟೆಸ್ಟ್ ಗೆಲ್ಲಬೇಕು. ಆಸ್ಟ್ರೇಲಿಯಾ ತಂಡವನ್ನು ಶ್ರೀಲಂಕಾ ಒಂದು ಟೆಸ್ಟ್ನಲ್ಲಿ ಸೋಲಿಸಬೇಕು.
ಆಸ್ಟ್ರೇಲಿಯಾ 2-3 ಅಂತರದಿಂದ ಸರಣಿ ಗೆದ್ದರೆ, ಮೂರು ಸರಣಿಗಳ ಫಲಿತಾಂಶದ ಬಳಿಕ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭವಿಷ್ಯ ನಿರ್ಧಾರವಾಗಲಿದೆ.