ವಾಷಿಂಗ್ಟನ್: ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ದಂಡನಾತ್ಮಕ ಸುಂಕವನ್ನು ಜಾರಿಗೆ ತಂದ ಕೆಲವೇ ಗಂಟೆಗಳಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ಅವರು ರಷ್ಯಾ-ಉಕ್ರೇನ್ ಸಂಘರ್ಷವನ್ನು “ಮೋದಿಯ ಯುದ್ಧ” ಎಂದು ಕರೆದಿದ್ದಾರೆ. ರಿಯಾಯಿತಿ ದರದಲ್ಲಿ ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದೇ ಮಾಸ್ಕೋದ ಮಿಲಿಟರಿ ಆಕ್ರಮಣಕ್ಕೆ ಇಂಧನ ಒದಗಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಭಾರತವು ರಷ್ಯಾದೊಂದಿಗಿನ ವ್ಯಾಪಾರವನ್ನು ನಿಲ್ಲಿಸಿದರೆ, ಅಮೆರಿಕ ವಿಧಿಸಿರುವ ಸುಂಕದಲ್ಲಿ ಶೇ. 25ರಷ್ಟು ಕಡಿತ ಮಾಡುವುದಾಗಿ ನವಾರೋ ಷರತ್ತು ವಿಧಿಸಿದ್ದಾರೆ. “ಶಾಂತಿಯ ಹಾದಿ ನವದೆಹಲಿಯ ಮೂಲಕವೇ ಸಾಗುತ್ತದೆ, ಅದಕ್ಕಾಗಿಯೇ ನಾನು ಇದನ್ನು ಮೋದಿಯ ಯುದ್ಧ ಎನ್ನುತ್ತೇನೆ,” ಎಂದು ಬ್ಲೂಮ್‌ಬರ್ಗ್ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ವಿರೋಧಿಸಿ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ. ಇದು ಏಷ್ಯಾದ ಯಾವುದೇ ರಾಷ್ಟ್ರದ ಮೇಲೆ ಅಮೆರಿಕ ವಿಧಿಸಿರುವ ಅತಿ ಹೆಚ್ಚಿನ ಸುಂಕವಾಗಿದೆ. ಬುಧವಾರದಿಂದಲೇ ಈ ಹೆಚ್ಚುವರಿ ಸುಂಕ ಜಾರಿಗೆ ಬಂದಿದೆ.
ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸಿ ಗಳಿಸಿದ ಹಣವನ್ನು ಮಾಸ್ಕೋ “ತನ್ನ ಯುದ್ಧ ಯಂತ್ರಕ್ಕೆ” ಬಳಸುತ್ತಿದೆ ಎನ್ನುವುದು ನವಾರೋ ಆರೋಪವಾಗಿದೆ. ಈ ಹಿಂದೆ ಟ್ರಂಪ್ ಕೂಡ ಇದೇ ರೀತಿಯ ಆರೋಪವನ್ನು ಮಾಡಿದ್ದಾರೆ. “ಭಾರತೀಯರು ಈ ಬಗ್ಗೆ ದುರಹಂಕಾರದ ಧೋರಣೆ ತೋರುತ್ತಿದ್ದಾರೆ. ‘ನಾವು ಯಾರಿಂದ ಬೇಕಾದರೂ ತೈಲ ಖರೀದಿಸಬಹುದು, ಇದು ನಮ್ಮ ಸಾರ್ವಭೌಮತ್ವ’ ಎಂದು ಭಾರತ ಹೇಳುತ್ತಿದೆ. ಭಾರತವೇ, ನೀವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಅದರಂತೆ ವರ್ತಿಸಿ, ಎಂದು ನವಾರೋ ಕಟುವಾಗಿ ಟೀಕಿಸಿದ್ದಾರೆ.
ಭಾರತದ ನಿಲುವೇನು?:
ಇಂಧನ ಬೆಲೆಗಳನ್ನು ಕಡಿಮೆ ಮತ್ತು ದೇಶೀಯ ಮಾರುಕಟ್ಟೆಯನ್ನು ಸ್ಥಿರವಾಗಿಡಲು ರಷ್ಯಾದ ತೈಲ ಖರೀದಿ ಅನಿವಾರ್ಯ ಎಂದು ಭಾರತ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಅಮೆರಿಕದ ಕ್ರಮವನ್ನು “ಅನ್ಯಾಯ” ಎಂದೂ ಭಾರತ ಬಣ್ಣಿಸಿದೆ. ಸುಂಕದ ಬಿಕ್ಕಟ್ಟಿನ ನಡುವೆ, ಕಳೆದ ವಾರಗಳಲ್ಲಿ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಲ್ಕು ಬಾರಿ ಫೋನ್ ಕರೆ ಮಾಡಲು ಪ್ರಯತ್ನಿಸಿದರೂ, ಮೋದಿ ಅವರು ಕರೆ ಸ್ವೀಕರಿಸಲಿಲ್ಲ ಎಂದು ಜರ್ಮನಿಯ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಆರ್ಥಿಕತೆಗೆ ಹೊಡೆತ:
ಈಗ ಅಮೆರಿಕ ಹೇರಿರುವ ದಂಡನಾತ್ಮಕ ಸುಂಕವು ಅಮೆರಿಕಕ್ಕೆ ರಫ್ತಾಗುವ ಶೇ. 55ಕ್ಕಿಂತ ಹೆಚ್ಚು ಭಾರತೀಯ ಸರಕುಗಳ ಮೇಲೆ ಪರಿಣಾಮ ಬೀರಲಿದೆ. ಜವಳಿ ಮತ್ತು ಆಭರಣಗಳಂತಹ ಕಾರ್ಮಿಕ-ಆಧಾರಿತ ಕೈಗಾರಿಕೆಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಈ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತವಾಗುವ ಭೀತಿಯೂ ಆರಂಭವಾಗಿದೆ.