ಬೆಂಗಳೂರು: ನಾನೇ 5 ವರ್ಷ ಸಿಎಂ ಎಂಬ ಸಿದ್ಧರಾಮಯ್ಯರ ಹೇಳಿಕೆ ವಿಚಾರವಾಗಿ ಬಿ.ವೈ. ವಿಜಯೇಂದ್ರ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಜನ ಸಿಎಂ ಆಗಲು ಪ್ರಯತ್ನ ಮಾಡುತ್ತಾರೆ. ಹಲವರು ಪ್ರಾರ್ಥನೆ ಮಾಡುತ್ತಿದ್ದಾರೆ. ಸುರ್ಜೇವಾಲಾ ಅವರನ್ನು ಕರೆಸುತ್ತಿದ್ದಾರೆ. ಮುಂದೆ ಸುರ್ಜೇವಾಲಾ ಅವರನ್ನು ಕರೆಯಿಸಿ ಭೂಮಿ ಪೂಜೆ, ಗುದ್ದಲಿ ಪೂಜೆ ಕೂಡ ಮಾಡಿಸುವವರಿದ್ದಾರೆ. ಏನೇನು ಆಗುತ್ತೆ ಕಾದು ನೋಡೋಣ ಎಂದಿದ್ದಾರೆ.
ನಮಗೆ ರಾಜ್ಯದ ಮುಖ್ಯಮಂತ್ರಿಗಳು ಯಾರಾಗುತ್ತಾರೆ? ಎಂಬುವುದು ಮುಖ್ಯವಲ್ಲ. ರಾಜ್ಯದ ಜನ ಛೀಮಾರಿ ಹಾಕುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ನೆರವಿಗೆ ಬರುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ. ಬಡವರಿಗೆ ಮನೆ ಕೊಡಲು ಆಗುತ್ತಿಲ್ಲ. ಮುಖ್ಯಮಂತ್ರಿಗಳು ಯಾರಾದ್ರೆ ಏನು? ಜನ ನೋವಿನಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಸರಿಯಾದ ದಿನಾಂಕದಲ್ಲಿ ಸಂಬಳ ಕೊಡಲು ಆಗುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ ಸಂಬಳ ಸರಿಯಾಗಿ ಆಗುತ್ತಿಲ್ಲ. ಈ ಸರ್ಕಾರ ಬದುಕಿದೆಯೋ? ಇಲ್ಲವೋ? ಗೊತ್ತಿಲ್ಲ. ಇದು ದರಿದ್ರ ಸರ್ಕಾರ ಎಂದು ಗುಡುಗಿದ್ದಾರೆ.



















