ಬೆಂಗಳೂರು : ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗಳಿಗೆ ಮೀಸಲಾಗಿ ನಿಗದಿಪಡಿಸಿದ್ದ ಸ್ಥಳವನ್ನು ಖಾಸಗಿ ಸಭೆ–ಸಮಾರಂಭಗಳಿಗೆ ಗುತ್ತಿಗೆ ನೀಡುವ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಶೇಷಾದ್ರಿ ರಸ್ತೆಯಲ್ಲಿದ್ದ ಕೇಂದ್ರ ಕಾರಾಗೃಹವನ್ನು ಸ್ಥಳಾಂತರಿಸಿದ ಬಳಿಕ, ಆ ಜಾಗದ ಅರ್ಧ ಭಾಗವನ್ನು ಉದ್ಯಾನವನವಾಗಿಯೂ, ಉಳಿದ ಭಾಗವನ್ನು ಸಾರ್ವಜನಿಕ ಪ್ರತಿಭಟನೆಗಳಿಗೆ ಮೀಸಲಿಟ್ಟು ಸರ್ಕಾರ ಅಭಿವೃದ್ಧಿಪಡಿಸಿತ್ತು. ಗಾಂಧಿನಗರ–ಮೆಜೆಸ್ಟಿಕ್ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯ ಕೊರತೆಯನ್ನು ಮನಗಂಡು ವಿಶಾಲ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿದ್ದು, ಅದರ ಮೇಲ್ಭಾಗದಲ್ಲಿ ಮಳೆ–ಬಿಸಿಲಿನಿಂದ ರಕ್ಷಣೆ ಸಿಗುವಂತೆ ಬೃಹತ್ ಶೆಡ್ ನಿರ್ಮಿಸಿ, ಯಾವುದೇ ಸಂಘ–ಸಂಸ್ಥೆಗಳು ಉಚಿತವಾಗಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಹೈಕೋರ್ಟ್ ನಿರ್ದೇಶನದಂತೆ ಸರ್ಕಾರ ಈ ಸ್ಥಳವನ್ನು ಅಧಿಕೃತವಾಗಿ ಪ್ರತಿಭಟನೆಗಳಿಗೆ ನಿಗದಿಪಡಿಸಿತ್ತು.
ಆದರೆ, ಕೇಂದ್ರ ನಗರಪಾಲಿಕೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಆದಾಯ ಕೊರತೆಯನ್ನು ಉಲ್ಲೇಖಿಸಿ, ಪ್ರತಿಭಟನೆಗೆ ಮೀಸಲಿಟ್ಟ ಸ್ಥಳವನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಕುರಿತು ಚಿಂತನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಸದಾಗಿ ನಿರ್ಮಿಸಿರುವ ಪ್ರತಿಭಟನೆ ಸ್ಥಳದಲ್ಲಿ ಸಭೆ, ಸಮಾರಂಭ ಹಾಗೂ ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ವಿಚಾರ ಪರಿಶೀಲನೆಯಲ್ಲಿ ಇದೆ ಎಂದು ಕೇಂದ್ರ ನಗರಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಇದಕ್ಕೆ ಹಲವು ಸಂಘ–ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪ್ರತಿಭಟನೆ ವೇಳೆ ಮಳೆ–ಬಿಸಿಲಿನ ತೊಂದರೆ ಆಗದಂತೆ ನಿರ್ಮಿಸಿದ ಶೆಡ್‌ನ ಉದ್ದೇಶವೇ ಬದಲಾಗುತ್ತಿದೆ ಎಂದು ಪ್ರಶ್ನಿಸಿರುವ ಸಂಘಟನೆಗಳು, ಹೈಕೋರ್ಟ್ ನಿರ್ದೇಶನದಂತೆ ನಿಗದಿಪಡಿಸಿದ ಸ್ಥಳವನ್ನು ಆದಾಯದ ಹೆಸರಿನಲ್ಲಿ ಖಾಸಗೀಕರಣ ಮಾಡುವುದು ಸರಿಯೇ? ಎಂದು ನಗರಪಾಲಿಕೆಯನ್ನು ಪ್ರಶ್ನಿಸಿವೆ.
ಪ್ರತಿಭಟನೆ ಹಕ್ಕು ಹಾಗೂ ಸಾರ್ವಜನಿಕ ಸ್ಥಳಗಳ ಬಳಕೆ ಕುರಿತಾಗಿ ಈ ನಿರ್ಧಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ | ಬೊಮ್ಮಾಯಿ



















