ಬೆಂಗಳೂರು: ಮನೆ ನಿರ್ಮಿಸಲೆಂದೋ, ಅಪಾರ್ಟ್ ಮೆಂಟ್ ಖರೀದಿಸಲು ಎಂದೋ, ಹೊಸ ಕಾರು ಖರೀದಿಸಲು ಎಂದೋ ಬ್ಯಾಂಕ್ ನಲ್ಲಿ ಸಾಲ ಮಾಡಿರುತ್ತೇವೆ. ವರ್ಷಗಟ್ಟಲೆ ಇಎಂಐ ಕಂತುಗಳನ್ನು ಕಟ್ಟಿರುತ್ತೇವೆ. ಹೀಗೆ ಹಂತ ಹಂತವಾಗಿ ಪ್ರತಿ ಇಎಂಐ ಕಟ್ಟಿ, ಸಾಲ ತೀರಿದ ಬಳಿಕ ಸುಮ್ಮನಿರಬಾರದು. ಬ್ಯಾಂಕ್ ಸಾಲ ತೀರಿದ ಬಳಿಕ ಒಂದಷ್ಟು ಪ್ರಕ್ರಿಯೆಗಳನ್ನು ಅನುಸರಿಸಲೇಬೇಕು. ವೈಯಕ್ತಿಕ ಹಣಕಾಸು ಏಳಿಗೆ, ಸುರಕ್ಷತೆ ದೃಷ್ಟಿಯಿಂದ ಇಷ್ಟೆಲ್ಲ ಕ್ರಮಗಳನ್ನು ಅನುಸರಿಸಬೇಕು.
- ಒರಿಜಿನಲ್ ದಾಖಲೆ ವಾಪಸ್ ಪಡೆಯಿರಿ
ಗೃಹಸಾಲ ಸೇರಿ ಯಾವುದೇ ರೀತಿಯ ಸಾಲ ನೀಡುವಾಗ ಬ್ಯಾಂಕ್ ಗಳು ನಮ್ಮಿಂದ ಹಲವು ದಾಖಲೆಗಳನ್ನು ಪಡೆದಿರುತ್ತವೆ. ಸಾಲ ಮರುಪಾವತಿ ಮಾಡಿದ ಕೂಡಲೇ ಎಲ್ಲ ಮೂಲ ದಾಖಲೆಗಳನ್ನು ವಾಪಸ್ ಪಡೆಯಬೇಕು. ಸಾಲದ ಒಪ್ಪಂದ ಪತ್ರ, ಸೇಲ್ ಡೀಡ್, ಟೈಟಲ್ ಡೀಡ್, ಮನೆಯ ಖಾತೆ, ತೆರಿಗೆ ಪಾವತಿ ರಿಸಿಪ್ಟ್ ಸೇರಿ ಹಲವು ದಾಖಲೆಗಳನ್ನು ಹಿಂಪಡೆಯಬೇಕು. ಸಾಲ ಪಾವತಿಸಿದ 15 ದಿನಗಳೊಳಗೆ ಬ್ಯಾಂಕ್ ನಿಮಗೆ ಎಲ್ಲ ದಾಖಲೆಗಳನ್ನು ವಾಪಸ್ ಕೊಡಬೇಕು ಎಂಬ ನಿಯಮ ಇದೆ ಎಂಬುದು ಗೊತ್ತಿರಲಿ. - ನೋ ಡ್ಯೂ ಸರ್ಟಿಫಿಕೇಟ್ ತೆಗೆದುಕೊಳ್ಳಿ
ವೈಯಕ್ತಿಕ ಸಾಲ ಮರುಪಾವತಿ ಮಾಡಿದ ಬಳಿಕ ಬ್ಯಾಂಕಿನಿಂದ ನೋ ಡ್ಯೂ ಸರ್ಟಿಫಿಕೇಟ್ (ಎನ್ ಡಿಸಿ) ಪಡೆಯಬೇಕು. ಅಂದರೆ, ಬ್ಯಾಂಕಿನಲ್ಲಿ ಪಡೆದ ಸಾಲಕ್ಕೆ ವ್ಯಕ್ತಿಯು ಯಾವುದೇ ಮರುಪಾವತಿ ಕಂತುಗಳನ್ನು ಉಳಿಸಿಕೊಂಡಿಲ್ಲ. ಎಲ್ಲ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಬ್ಯಾಂಕ್ ಸರ್ಟಿಫಿಕೇಟ್ ಕೊಡುತ್ತದೆ. ಅದನ್ನು ತಪ್ಪದೆ ಪಡೆಯಬೇಕು. ಇದು ಬೇರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ. - ಮಾಲೀಕತ್ವದ ಹಕ್ಕು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ
ಬ್ಯಾಂಕುಗಳು ಸಾಲ ನೀಡುವಾಗ ಸಾಲ ಪಡೆದ ವ್ಯಕ್ತಿಯ ಆಸ್ತಿಯ ಹಕ್ಕನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುತ್ತವೆ. ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಪಾವತಿಸದಿದ್ದರೆ, ಆಸ್ತಿ ಮಾರಾಟ ಮಾಡಿ, ಸಾಲ ತೀರಿಸಿಕೊಳ್ಳುವ ಹಕ್ಕುಗಳನ್ನು ಬ್ಯಾಂಕ್ ಹೊಂದಿರುತ್ತದೆ. ಅದಕ್ಕಾಗಿ, ಆಸ್ತಿ ಒಡೆತನದ ಹಕ್ಕನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುತ್ತವೆ. ಸಾಲ ಮರುಪಾವತಿ ಮಾಡಿದ ಕೂಡಲೇ ಆಸ್ತಿಯ ಮಾಲೀಕತ್ವದ ಹಕ್ಕನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವದನ್ನು ಮರೆಯಬಾರದು. - ಬ್ಲ್ಯಾಂಕ್ ಚೆಕ್ ವಾಪಸ್ ಪಡೆಯಿರಿ
ಬ್ಯಾಂಕಿನವರು ಸಾಲ ಕೊಡುವ ಸಂದರ್ಭದಲ್ಲಿ ನಿಮ್ಮಿಂದ ಸಹಿ ಮಾಡಿದ ಖಾಲಿ ಚೆಕ್ ಗಳನ್ನು ಪಡೆದುಕೊಂಡಿರುತ್ತಾರೆ. ಸಾಲದ ಇಎಂಐ ಕಟ್ಟದಿದ್ದರೆ, ಆ ಚೆಕ್ ಮೂಲಕ ಹಣ ಪಡೆಯಲು ಬ್ಯಾಂಕಿನವರು ಹೀಗೆ ಮಾಡುತ್ತಾರೆ. ಸಾಲ ಮರುಪಾವತಿ ಮಾಡಿದ ಕೂಡಲೇ ಆ ಖಾಲಿ ಚೆಕ್ ಗಳನ್ನು ಪಡೆದುಕೊಂಡು, ದುರ್ಬಳಕೆ ತಡೆಯಲು ಅವುಗಳನ್ನು ಹರಿದು ಹಾಕುವುದು ಒಳಿತು. - ಕ್ರೆಡಿಟ್ ಸ್ಕೋರ್ ಪರಿಷ್ಕರಿಸಿ
ಸಾಲವನ್ನು ತೀರಿಸಿದ ಬಳಿಕ ಕ್ರೆಡಿಟ್ ರಿಪೋರ್ಟಿನಲ್ಲಿ ಸಾಲ ಮರುಪಾವತಿಯಾಗಿರುವ ಮಾಹಿತಿ ಮರು ಪರಿಷ್ಕರಣೆ ಏಗಿದೆಯೇ, ಕ್ರೆಡಿಟ್ ಸ್ಕೋರ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಸಾಲದ ಮರುಪಾವತಿ ಮಾಡಿದ ಒಂದು ತಿಂಗಳ ಬಳಿಕ ಕ್ರೆಡಿಟ್ ರಿಪೋರ್ಟ್ ನಲ್ಲಿ ಮರುಪಾವತಿ ವಿಚಾರ ಉಲ್ಲೇಖವಾಗಿದೆಯೇ ಎಂಬುದನ್ನು ತಿಳಿಯಬೇಕು.