ಭಾರತಕ್ಕೆ ಸಂವಿಧಾನ ತಂದುಕೊಟ್ಟ ಪುಣ್ಯಾತ್ಮ ಅಂಬೇಡ್ಕರ್ ರನ್ನು ಕಾಂಗ್ರೆಸ್ ಹಂತಹಂತವಾಗಿ ತುಳಿಯುತ್ತಲೇ ಬಂದಿದೆ. ಅರವತ್ತೈದು ವರ್ಷ ಆಡಳಿತ ನಡೆಸಿದರೂ ಅಂಬೇಡ್ಕರ್ ಗೆ ಭಾರತ ರತ್ನ ನೀಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಗಾಂಧಿ ಕುಟುಂಬಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಭಾರತ ರತ್ನ ನೀಡಬೇಕು ಎಂಬ ಮನಸ್ಸು ಕೂಡ ಇರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ ಮೇಲೆ ಭಾರತ ರತ್ನ ನೀಡಿದರು. ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು. ಅವರನ್ನ ಸೋಲಿಸಿದವರಿಗೆ ಕಾಂಗ್ರೆಸ್ ಪದ್ಮಭೂಷಣ ನೀಡಿ ಸನ್ಮಾನಿಸಿತು. ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ಅವರ ಬಗ್ಗೆ ಒಳ್ಳೆಯ ವಿಚಾರ ಇಲ್ಲ ಎಂದಿದ್ದಾರೆ.
ಆದರೆ, ಈಗ ಚುನಾವಣೆಯಲ್ಲಿ ಸೋತ ಮೇಲೆ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪದೇ ಪದೇ ನೆನಪಿಸಿಕೊಳ್ಳುತ್ತಿದೆ. ಸಿದ್ದರಾಮಯ್ಯ, ಡಿಕೆಶಿ, ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ಅಂಬೇಡ್ಕರ್ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ರಾಜ್ಯದಲ್ಲಿ ಇರುವುದು ಜನ ವಿರೋಧಿ ಸರ್ಕಾರ. ಇದು ಬೆಲೆ ಏರಿಕೆ ಸರ್ಕಾರ. ಐವತ್ತು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ. ಎಸ್ಸಿ, ಎಸ್ಟಿ ಹಣವನ್ನು ದುರುಪಯೋಗ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಇಂತಹ ಸರ್ಕಾರವನ್ನು ರಾಜ್ಯದಿಂದ ಬುಡ ಸಮೇತ ಕಿತ್ತು ಒಗೆಯಬೇಕು ಎಂದು ಕರೆ ನೀಡಿದ್ದಾರೆ.
ಮುಂದೆ ಬರುವ ದಿನಗಳಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಏರುವ ಸಂಕಲ್ಪ ಮಾಡೋಣ. ಜನ ವಿರೋಧಿ ಸರ್ಕಾರವನ್ನು ಕಿತ್ತು ಒಗೆಯೋಣ ಎಂದು ಹೇಳಿದ್ದಾರೆ.


















