ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರರು ನಿರೀಕ್ಷೆಯ ಫಲಿತಾಂಶದ ಖುಷಿ ನೀಡಲು ಈ ಬಾರಿಯೂ ವಿಫಲರಾಗಿದ್ದಾರೆ. ಆದರೆ, ಈ ಬಾರಿ ಹಲವು ಆಟಗಾರರು ಪದಕ ಸುತ್ತಿನಲ್ಲಿ ಎಡವಿದ್ದು, ಕೂಡ ಭಾರತಕ್ಕೆ ನಿರಾಸೆ ಮೂಡಿಸಿದೆ.
ಇಂದು ಒಲಿಂಪಿಕ್ಸ್ ನಲ್ಲಿ ಭಾರತದ ಪಯಣ ಅಂತ್ಯವಾಗಿದೆ. ಪ್ರಸ್ತುತ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತ 6 ಪದಕ ಗೆದ್ದು ತಮ್ಮ ಹೋರಾಟ ಕೊನೆಗೊಳಿಸಿದೆ. ಆದರೆ, ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಗೆದ್ದಿತ್ತು. ಈ ಬಾರಿ ಅದಕ್ಕಿಂತ ಒಂದು ಕಡಿಮೆ ಪದಕ ಗೆದ್ದಿದೆ. ಆದರೆ, ಭಾರತದ ಎದರು ಈ ಬಾರಿ ಇನ್ನೂ 7 ಪದಕಗಳನ್ನು ಗೆಲ್ಲುವ ಅವಕಾಶವಿತ್ತು. ಹೋರಾಟ ಮಾಡುತ್ತ ಮಾಡುತ್ತ ಭಾರತೀಯ ಆಟಗಾರರು ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿ ನಿರಾಸೆ ಅನುಭವಿಸಿದರು. ಸಹಜವಾಗಿ ಭಾರತ ಕಡಿಮೆ ಪದಕ ಗೆದ್ದರು, ಈ ಹೋರಾಟ ಗಮನಿಸಿದರೆ, ಆತ್ಮವಿಶ್ವಾಸ ಹೆಚ್ಚಾಗುತ್ತಿದೆ.
ಮನು ಭಾಕರ್ ಈ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರು 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಆದರೆ, ಅವರು ಕೂಡ ಇನ್ನೊಂದು ಪದಕದಿಂದ ವಂಚಿತರಾಗಿದ್ದಾರೆ. 25 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಕೂದಲೆಳೆ ಅಂತರದಲ್ಲಿ ಸೋತು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹೀಗಾಗಿ ಮನು ಅವರು ಮತ್ತೊಂದು ಪದಕ ಗೆಲ್ಲಲು ವಿಫಲರಾದರು.
ಮೀರಾಬಾಯಿ ಚಾನು ಮೇಲೆ ಇಡೀ ಭಾರತ ಪದಕ ನಿರೀಕ್ಷೆ ಇಟ್ಟಿತ್ತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ಚಾನು, ಕೇವಲ 1 ಕೆಜಿ ಅಂತರದಿಂದ ನಾಲ್ಕನೇ ಸ್ಥಾನ ಪಡೆದುಕೊಳ್ಳುವಂತಾಯಿತು. ಶೂಟಿಂಗ್ ಸ್ಪರ್ಧೆಯಲ್ಲಿ ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೋಡಿಗೆ ಗೆಲುವ ಅವಕಾಶ ಸಿಕ್ಕಿತ್ತು. ಆದರೆ, ಈ ಜೋಡಿ ಕಂಚಿನ ಪದಕದ ಪಂದ್ಯದಲ್ಲಿ ಚೀನಾದ ಜಿಯಾಂಗ್ ಯುಟಿಂಗ್ ಮತ್ತು ಲಿಯು ಜಿಯಾಲಿನ್ ಜೋಡಿ ಎದುರು ಕೇವಲ 1 ಅಂಕದಿಂದ ಸೋಲು ಕಂಡರು. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಭಾರತದ ಶೂಟರ್ ಅರ್ಜುನ್ ಬಾಬುತಾ 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಕಂಚಿನ ಪದಕದ ಪಂದ್ಯ ಆಡಿದ್ದರು. ಆದರೆ ಅರ್ಜುನ್, ಕ್ರೊಯೇಷಿಯಾದ ಮಾರಿಸಿಕ್ ಮಿರಾನ್ ವಿರುದ್ಧ ಸೋಲು ಕಂಡು, ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ್ದರು. ಆದರೆ, ಸೆಮಿಫೈನಲ್ ನಲ್ಲಿ ಸೋಲು ಕಂಡು, ಆನಂತರ ನಡೆದ ಕಂಚಿನ ಪದಕದಲ್ಲಿ ಕೂಡ ಎಡವಿದರು. ಕಂಚಿನ ಪದಕದ ಪಂದ್ಯದಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಅವರು ನಂತರ ಮಲೇಷ್ಯಾದ ಲೀ ಜಿ ಜಿಯಾ ಅವರ ವಿರುದ್ಧ 13-21, 21-16, 21-11 ಸೋಲು ಕಂಡಿದ್ದಾರೆ.
ಮಿಶ್ರ ಆರ್ಚರಿ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಕಂಚಿನ ಪದಕದ ಪಂದ್ಯದವರೆಗೂ ಆಡಿತ್ತು. ಆದರೆ ಅಮೆರಿಕದ ಕೇಸಿ ಕೌಫೊಲ್ಡ್ ಮತ್ತು ಬ್ರಾಡಿ ಎಲಿಸನ್ ಜೋಡಿ ಎದುರು 2-6 ಅಂತರದಿಂದ ಸೋಲು ಕಂಡು, ಪದಕದಿಂದ ಹಿಂದೆ ಸರಿದು ನಿರಾಸೆಯಾದರು. ಈ ಜೋಡಿ ಕೂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.
ವಿನೇಶ್ ಫೋಗಟ್ ಮಹಿಳಾ ಕುಸ್ತಿಯ 50 ಕೆಜಿ ತೂಕ ವಿಭಾಗದಲ್ಲಿ ಫೈನಲ್ ತಲುಪಿದ್ದರು. ಆದರೆ, ಫೈನಲ್ ಪಂದ್ಯಕ್ಕೂ ಮುನ್ನ ತೂಕದಲ್ಲಿ ಹೆಚ್ಚಳವಾಗಿದ್ದರಿಂದಾಗಿ ಅನರ್ಹಗೊಂಡಿದ್ದಾರೆ. ಈ ಘಟನೆ ನಡೆಯದಿದ್ದರೆ ಭಾರತ ಮತ್ತೊಂದು ಬೆಳ್ಳಿ ಅಥವಾ ಚಿನ್ನವನ್ನು ಗೆದ್ದ ಸಾಧನೆ ಮಾಡುತ್ತಿತ್ತು. ಹೀಗಾಗಿ ಭಾರತ 6 ಪದಕಗಳನ್ನು ಗಳಿಸುವಂತಾಯಿತು. ನಾಲ್ಕನೇ ಸ್ಥಾನ ಗಳಿಸಿದವರು ಇನ್ನಷ್ಟು ಪೈಪೋಟಿ ನೀಡಿದ್ದರೆ, ಭಾರತದ ಸಾಧನೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಅಲ್ಲದೇ, ಹಲವರು ಕ್ವಾರ್ಟರ್ ಫೈನಲ್ ವರೆಗೂ ಬಂದು ಸೋತಿದ್ದಾರೆ. ಇದನ್ನು ಗಮನಿಸಿದರೆ, ಭಾರತದ ಮುಂದೊಂದು ದಿನ ಕ್ರೀಡಾ ಲೋಕದಲ್ಲಿ ಮಿಂಚುವುದು ಶತಸಿದ್ಧ.