ಶಿವಮೊಗ್ಗ: ಈ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆದ್ದನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಆಗಲಿದೆ. ಕಾಂಗ್ರೆಸ್ ಪಕ್ಷದಲ್ಲಂತೂ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಉಪ ಚುನಾವಣೆಯ ಫಲಿತಾಂಶದ ನಂತರ ಅವೆಲ್ಲ ಸ್ಫೋಟಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಾಚುನಾವಣೆಯ ಪ್ರಚಾರದ ಬಗ್ಗೆ ಮಾತನಾಡಿ, ಈ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆಯ ಚುನಾವಣೆಗೆ ದಿಕ್ಸೂಚಿ ಆಗಲಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನುಸವಾಲಾಗಿ ಸ್ವೀಕರಿಸಿದೆ. ಬಿಜೆಪಿ ಸಹ ಇದನ್ನು ಪಕ್ಷ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ನಮ್ಮೆಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಚುನಾವಣಾ ಕಣದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಬಾಗಲಕೋಟೆಯಲ್ಲಿ ಮೂರ್ನಾಲ್ಕು ದಿನ ಕಳೆದಿದ್ದೇನೆ. ದಾವಣಗೆರೆಯಲ್ಲೂ ನಾಳೆಯಿಂದ ಮೂರ್ನಾಲ್ಕು ದಿನ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಎರಡು ಕ್ಷೇತ್ರದಲ್ಲಿ ಮತದಾರರು ಆಡಳಿತರೂಢ ಸರ್ಕಾರದ ಬಗ್ಗೆ ಬೇಸತ್ತಿದ್ದು, ಆಡಳಿತ ವಿರೋಧಿ ಅಲೆ ಕಾಣುತ್ತಿದೆ. ಮುಖ್ಯಮಂತ್ರಿ ಹಾಗೂ ಆಡಳಿತ ಪಕ್ಷದವರು ಗ್ಯಾರಂಟಿಯ ಭ್ರಮೆಯಿಂದ ಹೊರಬರುವ ಅನಿವಾರ್ಯತೆ ಚುನಾವಣಾ ಫಲಿತಾಂಶ ಬಂದ ನಂತರ ಅರ್ಥವಾಗತ್ತದೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯನ್ನು ಹೊರತುಪಡಿಸಿ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿಲ್ಲ. ಶಿಕ್ಷಣ ಇಲಾಖೆ ಹದಗೆಟ್ಟು ಹೋಗಿದೆ, ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಔಷಧಿಗಳು ಇಲ್ಲದಂತಾಗಿದೆ ಇದರಿಂದಾಗಿ ಬಡವರು ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ. ಆದರೂ ಸರ್ಕಾರಕ್ಕೆ ಎಲ್ಲೋ ಒಂದು ಕಡೆ ಅಗಾಧವಾದ ವಿಶ್ವಾಸ ಇದೆ. ಆ ವಿಶ್ವಾಸ ಏನು ಎಂಬುದು ಚುನಾವಣಾ ಫಲಿತಾಂಶ ಬಂದ ನಂತರ ಅವರಿಗೆ ಅರ್ಥ ಆಗುತ್ತದೆ. ಎಂದು ಕಿಡಿಕಾರಿದ್ದಾರೆ.
ರಾಜ್ಯದ ಅಲ್ಪಸಂಖ್ಯಾತರು ಈಗಲಾದರೂ ವಾಸ್ತವ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಆಗಿ ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಅವರಿಗೆ ಈ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ರೀತಿಯ ಅನುಕೂಲ ಆಗಿಲ್ಲ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಸಾಕಷ್ಟು ಒತ್ತಡ ಹೇರಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ ದಾವಣಗೆರೆ ಹಾಗೂ ಬಾಗಲಕೋಟೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಲ್ಲ. ಅಲ್ಲಿಗೆ ಹೋಗಿ ನೋಡಿದರೆ ವಾಸ್ತವ ಏನು ಎಂಬುದು ಅರ್ಥ ಆಗುತ್ತದೆ ಎಂದಿದ್ದಾರೆ.
ಆದರೆ ಬಿಜೆಪಿಯ ಕಾರ್ಯಕರ್ತರು ರಣೋತ್ಸಹದಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲುವ ಲಕ್ಷಣ ಹೆಚ್ಚಾಗಿದೆ. ಹಾಗಾಗಿ ಮುಖ್ಯಮಂತ್ರಿ ಅವರು ಭಯಭೀತರಾಗಿದ್ದಾರೆ. ಆದ್ದರಿಂದ
ಮುಖ್ಯಮಂತ್ರಿಯಾದಿಯಾಗಿ ಸಚಿವರು ಬಾಗಲಕೋಟೆಯ ಗಲ್ಲಿ ಗಲ್ಲಿಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಎಲ್ಲಾ ಹಳ್ಳಿ ಹಳ್ಳಿಗಳಲ್ಲೂ ತಿರುಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂಥ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಮನಗರ, ಶಿಗ್ಗಾವ್ , ಚನ್ನಪಟ್ಟಣ ಮತ್ತು ಸಂಡೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ರೋಡ್ ಶೋ ಮಾಡಿದ್ದರು. ಆದರೆ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿರಲಿಲ್ಲ. ಇದು ಅವರಿಗೆ ಕಾಡುತ್ತಿರುವ ಸೋಲಿನ ಭಯವನ್ನು ತೋರಿಸುತ್ತದೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಆಗಲಿದೆ. ಕಾಂಗ್ರೆಸ್ ಪಕ್ಷದಲ್ಲಂತೂ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಉಪ ಚುನಾವಣೆಯ ಫಲಿತಾಂಶದ ನಂತರ ಅವೆಲ್ಲ ಸ್ಫೋಟಗೊಳ್ಳಲಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮತ ಬಿಜೆಪಿಗೆ ಬೇಡ ಎನ್ನುವ ಯತ್ನಾಳ್ ಒಬ್ಬ ಹುಚ್ಚ : ಶಾಸಕ ಆಸೀಫ್ ಸೇಠ್



















