ಗ್ಯಾರಂಟಿಗಳನ್ನು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿಲ್ಲ ಎನ್ನುವುದು ಅದೂ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಬೀತಾಗುತ್ತಿದೆ. ಬರೋಬ್ಬರಿ 3 ಲಕ್ಷದಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಹೀಗಾದರೆ ಆಡಳಿತ ಯಂತ್ರ ಸಾಗುವುದಾದರೂ ಹೇಗೆ? ಇದು ಇವತ್ತಿನ ಕಥೆಯಲ್ಲ, ಕಳೆದ ಕೆಲವು ವರ್ಷಗಳಿಂದಲೂ ಇಷ್ಟೊಂದು ಹುದ್ದೆಗಳು ರಾಜ್ಯದಲ್ಲಿ ಖಾಲಿ ಇವೆ. ಸರ್ಕಾರ 59 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಹೇಳುತ್ತಿದೆಯೇ ಹೊರತು, ಭರ್ತಿ ಕಾರ್ಯ ಮಾತ್ರ ಆರಂಭವಾಗುತ್ತಿಲ್ಲ. ಒಂದಿಲ್ಲೊಂದು ತೊಡರು, ಕಾರಣಗಳು ಅದಕ್ಕೆ ಎದುರಾಗುತ್ತಲೇ ಇವೆ.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಿದೆ. ಕಳೆದ ವರ್ಷವೂ ಇದೇ ರೀತಿ ಹುದ್ದೆಗಳು ಖಾಲಿ ಇದ್ದವು. ಈಗಲೂ ಅದೇ ರೀತಿ ಖಾಲಿ ಇವೆ. ಅಲ್ಲದೇ, ಮುಂದಿನ ಐದು ವರ್ಷಗಳಲ್ಲಿ ಲಕ್ಷದಷ್ಟು ಹುದ್ದೆಗಳು ಖಾಲಿ ಆಗಲಿವೆ. ಸದ್ಯ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 2,84,881, ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆ 1,01,295. ಅಲ್ಲದೇ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮುಂದಿನ 5 ವರ್ಷಗಳಲ್ಲಿ ನಿವೃತ್ತಿ ಹೊಂದಲಿರುವ ನೌಕರರ ಸಂಖ್ಯೆ 2026ರಲ್ಲಿ 16,513, 2027ರಲ್ಲಿ 16,800, 2028 ರಲ್ಲಿ 17,726, 2029ರಲ್ಲಿ 18,100, 2030ರಲ್ಲಿ 17,259.
3 ಲಕ್ಷದಷ್ಟು ಹುದ್ದೆಗಳು ಖಾಲಿಯಾಗಿದ್ದರೂ ಕಳೆದ ಎರಡ್ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಕೇವಲ 8,157 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಂಡಿದೆ. ಈ ಪೈಕಿ 2023ರಲ್ಲಿ ಕೆಪಿಎಸ್ಸಿ 655, ಕೆಇಎ 2,438 ಹುದ್ದೆಗಳು ಸೇರಿ ಒಟ್ಟು 3,093 ಹಾಗೂ 2024ರಲ್ಲಿ ಕೆಪಿಎಸ್ಸಿ 948, ಕೆಇಎ 4116 ಸೇರಿ 5,064 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅಂದರೆ 2 ವರ್ಷಗಳಲ್ಲಿ 8,157 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಂಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ಅತಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಇನ್ನುಳಿದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಒಳಾಡಳಿ, ಉನ್ನತ ಶಿಕ್ಷಣ, ಪಶುಸಂಗೋಪನೆ, ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇನ್ನು ಕೆಲವು ಇಲಾಖೆಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದ್ದು, ಜನರು ತಮ್ಮ ಕೆಲಸಕ್ಕೆ ಪರದಾಡುವಂತಾಗಿದೆ. ಅಲ್ಲದೇ, ಹುದ್ದೆ ಆಕಾಂಕ್ಷಿತ ಅಭ್ಯರ್ಥಿಗಳು ಕನಸು ಕಂಡು ಅನಿವಾರ್ಯವಾಗಿ ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ.
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ?
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ 79,694, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ 37,572, ಒಳಾಡಳಿತ 28,188, ಉನ್ನತ ಶಿಕ್ಷಣ 13,599, ಪಶುಸಂಗೋಪನೆ 11,020, ಕಂದಾಯ 10,867, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 10,504, ಪರಿಶಿಷ್ಟ ಜಾತಿಗಳ ಕಲ್ಯಾಣ 9,646, ಹಿಂದುಳಿದ ವರ್ಗಗಳ ಕಲ್ಯಾಣ-8,525, ಆರ್ಥಿಕ 7,668, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ 7,659, ಕೃಷಿ- 6,876, ಅರಣ್ಯ 6,478, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ 6,190, ಅಲ್ಸಂಖ್ಯಾತರ ಕಲ್ಯಾಣ 4,972, ಸಹಕಾರ 4,726, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 4,010, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 3,391, ರೇಷ್ಮೆ 3,337, ತೋಟಗಾರಿಕೆ 2,914, ಕಾರ್ಮಿಕ 2,668, ಪರಿಶಿಷ್ಟ ಪಂಗಡಗಳ ಕಲ್ಯಾಣ 2,435, ಸಾರಿಗೆ 1,541, ಆಹಾರ ಮತ್ತು ನಾಗರಿಕ ಸರಬರಾಜು 1,442, ಲೋಕೋಪಯೋಗಿ 1,408, ನಗರಾಭಿವೃದ್ಧಿ 914, ಸಣ್ಣ ನೀರಾವರಿ 869, ಮೀನುಗಾರಿಕೆ 838, ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ 721, ಗಣಿ 656, ಭಾರೀ ನೀರಾವರಿ 609, ಕನ್ನಡ ಮತ್ತು ಸಂಸ್ಕೃತಿ 444, ಸಂಸದೀಯ ವ್ಯವಹಾರಗಳು 433, ಭಾರೀ ಮತ್ತು ಮಧ್ಯಮ ಕೈಗಾರಿಕೆ 394, ಪ್ರವಾಸೋದ್ಯಮ 386, ಸಣ್ಣ ಕೈಗಾರಿಕೆ 360, ವಾರ್ತಾ 340, ಯುವಜನ ಸೇವೆಗಳು 212, ಇಂಧನ 187, ಇ-ಆಡಳಿತ- 73, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ 61, ಕೈಮಗ್ಗ ಮತ್ತು ಜವಳಿ 44, ಪರಿಸರ ಮತ್ತು ಜೀವಶಾಸ್ತ್ರ 10 ಸೇರಿದಂತೆ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ.
ಮೂರು ವರ್ಷಗಳಲ್ಲಿ ಬೆರಳಿಕೆಯಷ್ಟು ಹುದ್ದೆಗಳನ್ನು ಸೃಜಿಸಿರುವ ಸರ್ಕಾರಕ್ಕೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು ಸಾಧ್ಯವಾ? ಗ್ಯಾರಂಟಿ ಎಂಬ ಭಾರದ ಹೊರೆಯ ಮಧ್ಯೆ ಸರ್ಕಾರಿ ನೌಕರಿಗಾಗಿ ಕನಸು ಕಂಡವರ ಬದುಕು ಉಜ್ವಲವಾಗುವುದೇ ಕಾಯ್ದು ನೋಡಬೇಕಿದೆ.
ಇದನ್ನೂ ಓದಿ : ಚಿಕ್ಕಮಗಳೂರಿನ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ.. ನಾಳೆ ಹೇಗಿರಲಿದೆ ರಾಜ್ಯದ ಹವಾಮಾನ?


















