ಬೆಂಗಳೂರು: ಭಾರತಿ ನಗರದಲ್ಲಿ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗವಾಗಿವೆ.
ಗೆಳೆಯರಾಗಿದ್ದ ಜಗದೀಶ್ ಮತ್ತು ಬಿಕ್ಲು ಮಧ್ಯೆ ಫೆಬ್ರವರಿಯಿಂದ ವೈಷಮ್ಯ ಆರಂಭವಾಗಿತ್ತು. ಕಿತ್ತಗನೂರು ಜಮೀನು ಕಾಂಪೌಂಡ್ ಡೆಮಾಲಿಷ್ ಮಾಡಿದ ನಂತರ ಇಬ್ಬರ ಮಧ್ಯೆ ವೈಷಮ್ಯ ಆರಂಭವಾಗಿತ್ತು. ರವಿ ಎಂಬುವವರು ಕಿತ್ತಗನೂರು ಜಮೀನಿಗೆ ಕಾಂಪೌಂಡ್ ಹಾಕಿಸುತ್ತಿದ್ದರು. ಆ ವೇಳೆ ಬಿಕ್ಲು ಶಿವ ತಮ್ಮ ಹುಡುಗರನ್ನು ಕರೆದುಕೊಂಡು ಹೋಗಿ ಗಲಾಟೆ ಮಾಡಿದ್ದ. ಅಲ್ಲದೇ, ಕಂಪೌಂಡ್ ಧ್ವಂಸ ಮಾಡಿದ್ದ. ಆಗ ರವಿ ಬೆನ್ನಿಗೆ ಜಗದೀಶ್ @ಜಗ್ಗ ನಿಂತಿದ್ದ.
ಅಂದಿನಿಂದ ಬಿಕ್ಲು ಶಿವ ಮತ್ತು ಜಗದೀಶ್ ಮಧ್ಯೆ ದ್ವೇಷ ಶುರುವಾಗಿತ್ತು. ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ಕಿರಣ್ ಮತ್ತು ಜಗದೀಶ್, ಬಿಕ್ಲು ಶಿವಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಜಗದೀಶ್ ಗೆ ಶಾಸಕ ಬೈರತಿ ಬಸವರಾಜ್ ಬೆಂಬಲ ಕೂಡ ಇತ್ತು ಎಂಬ ಆರೋಪ ಕೇಳಿ ಬಂದಿದೆ.
ಬಿಕ್ಲು ಶಿವ ಜೀವ ಬೆದರಿಕೆ ಇರುವುದಾಗಿ ಕಳೆದ ಫೆಬ್ರವರಿ 18ರಂದು ಕಮಿಷನರ್ ದಯಾನಂದ್ ಗೆ ದೂರು ಕೂಡ ಸಲ್ಲಿಕೆ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಫೆ. 21ರಂದು ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಎಫ್ ಐಆರ್ ಗೆ ಜಗದೀಶ್ ಕೋರ್ಟ್ ನಿಂದ ಸ್ಟೇ ತಂದಿದ್ದರು. ನಂತರ ಬಿಕ್ಲು ರಾಮಮೂರ್ತಿನಗರ ಪೊಲೀಸ್ ಠಾಣೆಗೂ ದೂರು ನೀಡಿದ್ದ. ಆದರೆ, ಪೊಲೀಸರು ಎನ್ ಸಿಆರ್ ದಾಖಲಿಸಿ ನಿರ್ಲಕ್ಷ್ಯ ವಹಸಿದ್ದರು ಎಂಬ ಆರೋಪ ಈಗ ಕೇಳಿ ಬಂದಿದೆ.
ಆದರೆ, ಕಿತ್ತಗನೂರು ಜಮೀನು ವ್ಯಾಜ್ಯದಿಂದಾಗಿ ಬಿಕ್ಲು ಹತ್ಯೆಯಾಗಿದ್ದಾನೆ. ಕಿತ್ತಗನೂರು ಜಮೀನಿಗೆ ಮೂವರು ಮಾಲೀಕರಿದ್ದರು. ನದಾಫ್ ಎಂಬುವವರಿಂದ ಬಿಕ್ಲು ಅಗ್ರಿಮೆಂಟ್ ಮಾಡಿಸಿಕೊಂಡಿದ್ದ. ಮತ್ತೊಬ್ಬ ಮಾಲೀಕನಿಂದ ರವಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ. ರವಿಗೆ ಕಿರಣ್ ಮತ್ತು ಜಗದೀಶ್ ಬೆಂಬಲ ಇತ್ತು. ಜಮೀನು ವಿಚಾರವಾಗಿಯೇ ಗೆಳೆಯರ ಮಧ್ಯೆ ದ್ವೇಷ ಶುರುವಾಗಿತ್ತು. ಈಗ ಅದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಈಗ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ ಶುರುವಾಗಿದೆ.



















