ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಸಾರ್ವಜನಿಕ ವಲಯದ ಕಂಪನಿ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ (EIL Recruitment 2025) ಖಾಲಿ ಇರುವ 52 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 52 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬಿಎಸ್ಸಿ, ಬಿಇ ಹಾಗೂ ಬಿ ಟೆಕ್ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಕೆಮಿಕಲ್ – 12, ಮೆಕ್ಯಾನಿಕಲ್ – 14, ಸಿವಿಲ್ – 18 ಮತ್ತು ಎಲೆಕ್ಟ್ರಿಕಲ್ ವಿಭಾಗದಲ್ಲಿ 8 ಹುದ್ದೆಗಳಿವೆ. ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ತತ್ಸಮಾನ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು engineersindia.com ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದಾಗಿದೆ.
ವಯೋಮಿತಿ ಎಷ್ಟು?
ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ (ಜನರಲ್) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ-ಎನ್ಸಿಎಲ್) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ ಹೇಗೆ?
ಶಾರ್ಟ್ ಲಿಸ್ಟ್, ಗೇಟ್-2025 (GATE-2025)ಪರೀಕ್ಷೆ, ಗ್ರೂಪ್ ಡಿಸ್ಕಷನ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 60,000 ರೂ.-1,80,000 ರೂ. ಮಾಸಿಕ ವೇತನ ದೊರೆಯಲಿದೆ. ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಪ್ರಧಾನ ಕಚೇರಿ ದಿಲ್ಲಿಯ ಭಿಕಾಜಿ ಕಾಮಾ ಪ್ಲೇಸ್ನಲ್ಲಿದೆ.
ಇಐಎಲ್ ಗುರುಗ್ರಾಮದಲ್ಲಿ ಆರ್ & ಡಿ ಕಾಂಪ್ಲೆಕ್ಸ್, ಮುಂಬೈಯಲ್ಲಿ ಶಾಖಾ ಕಚೇರಿ, ಕೋಲ್ಕತ್ತಾ, ಚೆನ್ನೈ, ವಡೋದರಾದಲ್ಲಿ ಪ್ರಾದೇಶಿಕ ಕಚೇರಿಗಳು, ಭಾರತದ ಎಲ್ಲ ಪ್ರಮುಖ ಉಪಕರಣ ಉತ್ಪಾದನಾ ಸ್ಥಳಗಳಲ್ಲಿ ಪರಿಶೀಲನಾ ಕಚೇರಿಗಳು ಮತ್ತು ಲಂಡನ್ (ಇಂಗ್ಲೆಂಡ್), ಮಿಲನ್ (ಇಟಲಿ), ಶಾಂಘೈ (ಚೀನಾ), ಅಬುಧಾಬಿ (ಯುಎಇ)ಯಲ್ಲಿ ಸಾಗರೋತ್ತರ ಕಚೇರಿಗಳನ್ನು ಹೊಂದಿದೆ.