ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂ ಸವಾರಿ ವಿಜಯದಶಮಿಯ ದಿನವಾದ ಗುರುವಾರ ವೈಭವೋಪೇತವಾಗಿ ಜರುಗಲಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ನಾಳೆ ಅಂಬಾವಿಲಾಸ ಅರಮನೆ ಆವರಣದಿಂದ ಜಂಬೂ ಸವಾರಿಗೆ ಚಾಲನೆ ದೊರೆಯಲಿದ್ದು, ಮಧ್ಯಾಹ್ನ 1ರಿಂದ 1.18ರೊಳಗೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ನಂತರ ಸಂಜೆ 4.42ರಿಂದ 5.06ರವರೆಗೆ ನಡೆಯುವ ಮಹತ್ವದ ಕ್ಷಣದಲ್ಲಿ ಗಜಪಡೆಯ ಅಗ್ರಗಣ್ಯ ‘ಅಭಿಮನ್ಯು’ ಆನೆ, 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ. ಈ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಸಂಪ್ರದಾಯಬದ್ಧವಾಗಿ ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ.
ಜಂಬೂ ಸವಾರಿಯೂ ಅರಮನೆ ಆವರಣದಿಂದ ಶುರುವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪರಂಪರೆ, ಭಕ್ತಿ ಮತ್ತು ಕಲಾತ್ಮಕತೆಯ ಅದ್ಭುತ ನೋಟವನ್ನು ಕಣ್ತುಂಬಿಸಲಿದೆ. ಸಾವಿರಾರು ಜನರು ಹಾಗೂ ದೇಶ-ವಿದೇಶದ ಪ್ರವಾಸಿಗರು ಈ ವೈಭವದ ಸಾಕ್ಷಿಗಳಾಗಲು ನಿರೀಕ್ಷೆಯಿದ್ದು, ಸದ್ಯ ಇಡೀ ಮೈಸೂರು ನಗರವು ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ.